ಬರಿಮಾರಿನಲ್ಲಿ ಖಾಸಗಿ ಶಾಲಾ ಬಸ್ ಮೇಲೆ ಮರ ಬಿದ್ದು ಮೃತಪಟ್ಟ ಬಾಲಕಿ ಚಿರನ್ವಿ ಕುಟುಂಬಕ್ಕೆ ೫ ಲಕ್ಷ ರೂ. ಪರಿಹಾರದ ಆದೇಶ ಪತ್ರವನ್ನು ಶಾಸಕ ಅಶೋಕ್ ರೈ ವಿತರಿಸಿದರು. ಉಮಾನಾಥ ಶೆಟ್ಟಿ ಪೆರ್ನೆ, ರವಿ, ಮನೋಹರ್ ಉಪಸ್ಥಿತರಿದ್ದರು.
- ಶಾಸಕ ಅಶೋಕ್ ಕುಮಾರ್ ರೈ ಹೇಳಿಕೆ
ಪುತ್ತೂರು: ಅನಾಹುತಗಳಲ್ಲಿ ಮೃತಪಟ್ಟ ಕುಟುಂಬಗಳಿಗೆ ಧೈರ್ಯ ತುಂಬಿ ಸಾಂತ್ವನ ಹೇಳುವ ಜತೆಗೆ ಸರ್ಕಾರದಿಂದ ಪರಿಹಾರ ಮೊತ್ತ ದೊರಕಿಸಿ ಕೊಡಬೇಕು. ಮುಖ್ಯಮಂತ್ರಿಗಳಿಗೆ ಕುಟುಂಬಗಳ ಸಮಸ್ಯೆಯನ್ನು ವಿವರಿಸಿ ಪರಿಹಾರ ಮೊತ್ತ ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಕೋಡಿಂಬಾಡಿ ರೈ ಎಸ್ಟೇಟ್‌ನಲ್ಲಿ, ಸುಳ್ಯದ ಅವಳಿ ಮಕ್ಕಳ ಕುಟುಂಬಕ್ಕೆ ಪರಿಹಾರ ಮೊತ್ತದ ಆದೇಶ ಪತ್ರ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ಶಾಲಾ ಬಸ್ ದುರಂತದಲ್ಲಿ ಗಾಯಗೊಂಡ ಮಕ್ಕಳ ಚಿಕಿತ್ಸೆಯ ಕುರಿತು ಸಂಬಂಧಪಟ್ಟವರು ಗಮನಕ್ಕೆ ತಂದರೆ ಅವರಿಗೂ ಸೂಕ್ತ ಬೆಂಬಲ ನೀಡಲು ಪ್ರಯತ್ನಿಸಲಾಗುವುದು. ಸಂಪಾಜೆಯ ನಿಶಾನ ಸಾವಿನ ಪ್ರಕರಣ ಈಗ ಪೊಲೀಸ್ ತನಿಖೆಯಲ್ಲಿದ್ದು, ಎಸ್‌ಪಿ ಹಾಗೂ ಕುಟುಂಬದ ಜತೆ ಮಾತುಕತೆ ನಡೆಸಿದ್ದೇನೆ ಎಂದರು.
ಬರಿಮಾರಿನಲ್ಲಿ ಶಾಲಾ ಬಸ್ ಮೇಲೆ ಮರ ಬಿದ್ದು ಮೃತಪಟ್ಟ ಬಾಲಕಿ ಚಿರನ್ವಿ ಕುಟುಂಬಕ್ಕೆ ೫ ಲಕ್ಷ ರೂ., ಸುಳ್ಯದಲ್ಲಿ ನೀರಿಗೆ ಬಿದ್ದು ಮೃತಪಟ್ಟ ಅವಳಿ ಮಕ್ಕಳ ಕುಟುಂಬಕ್ಕೆ ೧೦ ಲಕ್ಷ ರೂ. ಪರಿಹಾರ ಮೊತ್ತದ ಆದೇಶ ಪತ್ರವನ್ನು ಹಸ್ತಾಂತರಿಸಿದರು.
ಪುತ್ತೂರು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ, ಯು.ಟಿ.ತೌಸೀಫ್, ಪದ್ಮನಾಭ ಪೂಜಾರಿ ಸಣ್ಣಗುತ್ತು, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಜಯಪ್ರಕಾಶ್ ಬದಿನಾರು, ಬಂಟ್ವಾಳ ಅಕ್ರಮ-ಸಕ್ರಮ ಸಮಿತಿ ಮಾಜಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ವಿಟ್ಲ ಕಂದಾಯ ನಿರೀಕ್ಷಕ ರವಿ, ಗ್ರಾಮ ಆಡಳಿತಾಧಿಕಾರಿ ಮನೋಹರ್ ಉಪಸ್ಥಿತರಿದ್ದರು.