ನಾಗಮಂಗಲ: ಗೋಮಾಳ ಒತ್ತುವರಿ ಮಾಡಿಕೊಂಡು ಸರ್ಕಾರಿ ಜಮೀನು ಕಬಳಿಕೆ ಮಾಡಲು ಕೆಲವು ಮಧ್ಯವರ್ತಿಗಳ ಮುಂದಾಗಿದ್ದು, ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಶಾಸಕ ಸುರೇಶ್‌ಗೌಡ ನೇತೃತ್ವದಲ್ಲಿ ನೂರಾರು ಗ್ರಾಮಸ್ಥರು ಶನಿವಾರ ಅಹೋರಾತ್ರಿ ಧರಣಿ ನಡೆಸಿದರು.
ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಅದ್ದಿಹಳ್ಳಿ ಗ್ರಾಮದ ಸರ್ವೇ ನಂಬರ್ 35ಕ್ಕೆ ಸೇರಿದ ಜಮೀನಿನ ಜತೆಗೆ ವಾರಸುದಾರರು ಹಾಗೂ ಕೆಲವು ಮಧ್ಯವರ್ತಿಗಳು ಸೇರಿಕೊಂಡು ರಸ್ತೆ, ಸರ್ಕಾರಿ ಗೋಮಾಳವನ್ನು ಒತ್ತುವರಿ ಮಾಡುವ ಮೂಲಕ ಸರ್ಕಾರಿ ಜಮೀನನ್ನು ಕಬಳಿಸಲು ಮುಂದಾಗಿದ್ದಾರೆ. ಗ್ರಾಮಸ್ಥರಿಗೂ ಕಿರುಕುಳ ನೀಡುತ್ತಿದ್ದಾರೆ.
ಸರ್ವೇ ನಂಬರ್ 35ರಲ್ಲಿ ಜಯಮ್ಮ ಕೋಂ ಜವರಾಯ, ಭಾಗ್ಯಮ್ಮ ಕೋಂ. ಲೇ.ಪುಟ್ಟಸ್ವಾಮಿ, ನಿಂಗಮ್ಮ ಕೋಂ. ಲೇ.ಬೋರಯ್ಯ ಹಾಗೂ ಶಿವಲಿಂಗಯ್ಯ ಕೋಂ. ಲಕ್ಕಯ್ಯ ಎಂಬುವರ ಜಂಟಿ ಖಾತೆಯಲ್ಲಿ ಒಟ್ಟು 6.39 ಎಕರೆ ಜಮೀನಿದೆ. ಜಮೀನಿನ ಪಕ್ಕದಲ್ಲಿ ಶ್ರವಣಬೆಳಗೊಳ-ನಾಗಮಂಗಲ ಮುಖ್ಯ ರಸ್ತೆಯಿದ್ದು , ಅದರ ಪಕ್ಕದಲ್ಲಿ ಸರ್ಕಾರಿ ಗೋಮಾಳವಿದೆ. ರಸ್ತೆ ಬದಿಯಲ್ಲಿನ ಉಳಿಕೆ ಜಮೀನು ಹಾಗೂ ಗೋಮಾಳವನ್ನು ಒತ್ತುವರಿ ಮಾಡಿಕೊಂಡು ಸರ್ಕಾರಿ ಜಮೀನನ್ನು ಕಬಳಿಸಲು ಕೆಲವು ಮಧ್ಯವರ್ತಿಗಳ ಮೂಲಕ ಗ್ರಾಮಸ್ಥರ ಮೇಲೆ ದಬ್ಬಾಳಿಕೆ ಮಾಡುವ ಜತೆಗೆ ಜಾತಿನಿಂದನೆ ಪ್ರಕರಣ ದಾಖಲಿಸಿ ಬೆದರಿಸಿ ಗೂಂಡಾಗಿರಿ ಮಾಡುವ ಮೂಲಕ ಜಮೀನನ್ನು ಕಬಳಿಸಲು ಮುಂದಾಗಿದ್ದಾರೆ ಎಂದು ಶಾಸಕ ಸುರೇಶ್‌ಗೌಡ ಆರೋಪಿಸಿದರು.
ಈ ಹಿಂದೆ ಒತ್ತುವರಿ ಪ್ರಶ್ನಿಸಿದ ಗ್ರಾಮಸ್ಥರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದು , ಜನರಿಗೆ ಭಯ ಉಂಟು ಮಾಡಿದ್ದಾರೆ. ರಸ್ತೆ ಬದಿಯಲ್ಲಿದ್ದ ಸರ್ಕಾರಿ ಜಾಗದಲ್ಲಿ ಹತ್ತಾರು ವರ್ಷಗಳಿಂದ ನಿರ್ಮಿಸಿದ್ದ ಅಂಗಡಿ ಮಳಿಗೆಗಳು ನಮಗೆ ಸೇರಿದ್ದವು ಎಂದು ಏಕಾಏಕಿ ಜೆಸಿಬಿ ಯಂತ್ರದ ಮೂಲಕ ಧ್ವಂಸಗೊಳಿಸಿದ್ದಾರೆ. ತಮ್ಮ ಜಮೀನನ್ನು ಸರ್ವೇ ಮಾಡಿಸದೆ ಸರ್ಕಾರಿ ಜಾಗದಲ್ಲಿದ್ದ ಅಂಗಡಿ ಮಳಿಗೆಗಳನ್ನು ಧ್ವಂಸಗೊಳಿಸಿರುವುದು ಕಾನೂನು ಬಾಹಿರವಾಗಿದ್ದು ತಪ್ಪಿತಸ್ಥರ ವಿರುದ್ಧ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ತಹಸೀಲ್ದಾರ್ ನಂದೀಶ್ ಹಾಗೂ ಸಿಪಿಐ ಸುಧಾಕರ್ ಭೇಟಿ ನೀಡಿ ಶಾಸಕ ಸುರೇಶ್‌ಗೌಡ ಹಾಗೂ ಗ್ರಾಮಸ್ಥರನ್ನು ಮನವೊಲಿಸಲು ಹರಸಾಹಸಪಟ್ಟರು. ಆದರೆ, ಬಿಗಿಪಟ್ಟು ಹಿಡಿದು ಕುಳಿತ ಶಾಸಕ ಸುರೇಶ್‌ಗೌಡ ತಮ್ಮ ಒತ್ತಾಯ ಈಡೇರುವವರೆಗೆ ಧರಣಿ ಕೈಬಿಡುವುದಿಲ್ಲ ಎಂದರು.
ನಂತರ ತಹಸೀಲ್ದಾರ್ ನೇತೃತ್ವದಲ್ಲಿ ಸರ್ವೇ ನಡೆಸಿ ಜಮೀನಿನ ಗಡಿ ನಿರ್ಮಿಸಿದರು. ಆದರೆ, ಸರ್ಕಾರಿ ಜಮೀನಿನಲ್ಲಿದ್ದ ಅಂಗಡಿ ಮಳಿಗೆಗಳನ್ನು ಧ್ವಂಸಗೊಳಿಸಿದ್ದ ಜಮೀನಿನ ಮಾಲೀಕರು ಹಾಗೂ ಮಧ್ಯವರ್ತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರನ್ನು ಬಂಧಿಸುವಂತೆ ಆಗ್ರಹಿಸಿದರು. ನಂತರ ಅಂಗಡಿ ಮಾಲೀಕರು ನೀಡಿದ ದೂರಿನ ಮೇರೆಗೆ ಜಮೀನಿನ ಮಾಲೀಕರ ಸಂಬಂಧಿ ಜಯರಾಜ್ ಎಂಬುವನ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸುವಂತೆ 2 ದಿನಗಳ ಗಡುವು ನೀಡಿ ಅಧಿಕಾರಿಗಳ ಮನವೊಲಿಕೆ ನಂತರ ಪ್ರತಿಭಟನೆ ಕೈಬಿಡಲಾಯಿತು.