ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಸುಮಾರು ವರ್ಷಗಳ ದಲಿತ ಸಮಸ್ಯೆಗಳು ಇಂದಿಗೂ ಬಗೆಹರಿಸದೇ ಇರುವುದು ಬೇಸರದ ಸಂಗತಿ. ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಯೋಜಿಸಿದ್ದ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು. ಸರ್ಕಾರದ ಸೌಲಭ್ಯವನ್ನು ಅರ್ಹ ಕುಟುಂಬಗಳಿಗೆ ನೇರವಾಗಿ ತಲುಪಿಸುವ ಕಾರ್ಯ ಮಾಡಬೇಕಿದೆ. ತಾಲೂಕಿನ ಪ್ರತಿ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸುವಂತೆ ನಿರ್ದೇಶನ ನೀಡಿದ್ದು ಈಗಾಗಲೇ ಕಂದಾಯ ಇಲಾಖೆ ಗುರುತಿಸುವ ಕಾರ್ಯ ಮಾಡಲಾಗಿದೆ. ನಗರದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಈಗಾಗಲೇ ಸರ್ಕಾರದ ಹಂತದಲ್ಲಿ 25ಕೋಟಿ ರೂ.ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿದ್ದು 1 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುವುದು. ಪರಿಶಿಷ್ಟ ಜಾತಿ ಪಂಗಡದವರ ಕಾರ್ಯಕ್ರಮಗಳ ಅನುಕೂಲಕ್ಕಾಗಿ ದಾಬಸ್‌ಪೇಟೆ ಮತ್ತು ತ್ಯಾಮಗೊಂಡ್ಲು ಪಟ್ಟಣಗಳಲ್ಲಿ ಹೋಬಳಿ ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಪಿಡಿಒ ವಿರುದ್ಧ ಕ್ರಮ: ತಾಲೂಕಿನ ಬಾವಿಕೆರೆ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಯ ಎ.ಕೆ.ತಿಪ್ಪೇಗುಂಡಿ ಜಾಗಕ್ಕೆ ಸಂಬಂಧಪಟ್ಟ ಮಾಹಿತಿ ನೀಡಲು ಯಂಟಗಾನಹಳ್ಳಿ ಪಿಡಿಒ ಅಭಿಲಾಷ್ ಸಭೆ ಹಾಜರಾಗಿಲ್ಲದೇ ಇರುವುದು ಹಾಗೂ ಸ್ಥಳೀಯ ಮುಖಂಡರು ಪಿಡಿಒ ಮೇಲೆ ಸಾಕಷ್ಟು ಅರೋಪಮಾಡಿದ್ದು ಕೂಡಲೇ ಪಿಡಿಒ ವಿರುದ್ಧ ಶಿಸ್ತು ಕ್ರಮಕೊಂಡು ಅಮಾನತುಪಡಿಸುವಂತೆ ಮೇಲಾಧಿಕಾರಿಗಳಿಗೆ ದೂರು ನೀಡುವಂತೆ ತಹಸೀಲ್ದಾರ್‌ಗೆ ಶಾಸಕರು ಸೂಚಿಸಿದರು.
ಶಾಶ್ವತ ಪರಿಹಾರ ಕಲ್ಪಿಸಬೇಕು: ಯಾವುದೇ ಪ್ರತ್ಯೇಕ ಜಾತಿ ಜನಾಂಗಕ್ಕೆ ಸ್ಮಶಾನ ಮಂಜೂರು ಮಾಡಲು ಸಾಧ್ಯವಿಲ್ಲ. ಜತೆಗೆ ಪಿಟಿಸಿಎಲ್ ಕಾಯ್ದೆ ಅನ್ವಯ ನಿಯಮ ಬಾಹಿರ ಕೆಲಸ ತಾಲೂಕು ಆಡಳಿತ ಮಾಡಬಾರದು. ದಲಿತ ಮುಖಂಡರು ಹಾಗೂ ಸಾರ್ವಜನಿಕರು ನೀಡಿರುವ ಸಮಸ್ಯೆಗಳಿಗೆ ಅಧಿಕಾರಿಗಳು ಶಾಶ್ವತ ಪರಿಹಾರ ಒದಗಿಸುವ ಕೆಲಸ ಮಾಡಬೇಕು. ಜತೆಗೆ ಸಮಸ್ಯೆಗಳನ್ನು ಸಭೆಯಲ್ಲದೇ ನನ್ನ ಗೃಹ ಕಚೇರಿಯಲ್ಲೂ ಗಮನಕ್ಕೆ ತಂದರೇ ಪರಿಹಾರ ಕಲ್ಪಿಸಲಾಗುವುದು ಎಂದು ಶಾಸಕರು ತಿಳಿಸಿದರು. ಸರ್ಕಾರದಿಂದ ಪೋಡಿ ಆಂದೋಲನ ಮಾಡುತ್ತಿದ್ದು ಶೀಘ್ರದಲ್ಲಿ ಪೋಡಿ ಪ್ರಕರಣ ಮುಕ್ತ ತಾಲೂಕು ಆಗಲಿದೆ. ತಾಲೂಕಿನ ವಿವಿಧೆಡೆ ಈಗಾಗಲೇ ಸಾರ್ವಜನಿಕ ಸ್ಮಶಾನಕ್ಕಾಗಿ ಜಾಗ ಗುರುತಿಸಿ ಮೀಸಲಿಡಲಾಗಿದೆ ಎಂದು ತಹಸೀಲ್ದಾರ್ ಅಮೃತ್ ಅತ್ರೇಶ್ ಮಾಹಿತಿ ನೀಡಿದರು.
ಮುಖಂಡರ ಮನವಿ:
ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆ, ಇಎಸ್‌ಐ ಪಿಎಫ್ ನೀಡುವಂತೆ ಕಲ್ಯಾಣಿನಾಗರಾಜು ಮನವಿ ಮಾಡಿದರೇ, ಛಲವಾದಿನಾಗೇಂದ್ರ ಯಂಟಗಾನಹಳ್ಳಿ ಪಿಡಿಒ ದಲಿತರ ಕೆಲಸಕ್ಕೆ ನಿರ್ಲಕ್ಷ್ಯ ತೋರಿಸುತ್ತಿದ್ದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಸಮಿತಿ ಹಾಗೂ ಉಸ್ತುವಾರಿ ಸಮಿತಿ ಸದಸ್ಯರು ಬದಲಾವಣೆ ಮಾಡುವಂತೆ ಭಿನ್ನಮಂಗಲವೆಂಕಟೇಶ್ ಮನವಿ ಮಾಡಿದರು.