ಜಿಲ್ಲೆ

ಸಿಎಂ ಬದಲಿಸಲು ಸ್ವಪಕ್ಷೀಯರೇ ಹೊರಟಿರುವುದು ದುರದೃಷ್ಟಕರ ; ಶಾಸಕ ಡಾ.ಜಿ.ಪರಮೇಶ್ವರ್ ಹೇಳಿಕೆ ; ಕಿತ್ತಾಟದಿಂದ ಆಡಳಿತದ ಮೇಲೆ ಪರಿಣಾಮ

Tumakuru

ತುಮಕೂರು : ಸಿಎಂ ಯಡಿಯೂರಪ್ಪ ಅವರನ್ನು ಸ್ವಪಕ್ಷೀಯರೇ ಬದಲಾಯಿಸಲು ಹೊರಟಿರುವುದು ದುರದೃಷ್ಟಕರ ಎಂದು ಮಾಜಿ ಡಿಸಿಎಂ, ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾ ದಿನಾಚರಣೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರನ್ನು ಖರೀದಿ ಮಾಡಿ ಕಷ್ಟಬಿದ್ದು ಸರ್ಕಾರ ರಚನೆ ಮಾಡಿದ ಬಿಎಸ್‌ವೈ ಮುಖ್ಯಮಂತ್ರಿಯಾಗಿ ಬಹಳ ಆಸೆ ಇಟ್ಟುಕೊಂಡು ಆಡಳಿತ ನಡೆಸುವ ಪ್ರಯತ್ನ ಮಾಡಿದ್ದರು. ಆದರೆ, ಸಂಪುಟದಲ್ಲಿದ್ದುಕೊಂಡು ಸಂಪುಟದ ಮುಖ್ಯಸ್ಥರನ್ನೇ ಬದಲಾಯಿಸಲು ಕೆಲವರು ಹೊರಟಿರುವುದು ಅಚ್ಚರಿ ಎನಿಸಿದೆ.

ಯಡಿಯೂರಪ್ಪ ನಿಜಕ್ಕೂ ಶಕ್ತಿಯುತವಾಗಿದ್ದರೆ ಅಂತಹವರನ್ನು ಕೈ ಬಿಡಬೇಕು. ಯಡಿಯೂರಪ್ಪ ಅವರನ್ನು ಬದಲಾಯಿಸಲು ಹೊರಟಿರುವವರು ಶಕ್ತಿಯುತವಾಗಿದ್ದರೆ ಮುಖ್ಯಮಂತ್ರಿಗಳನ್ನು ಬದಲಾಯಿಸಬೇಕು. ಇದ್ಯಾವುದನ್ನೂ ಮಾಡದೆ ವಿನಾಕಾರಣ ಕಾಲಹರಣ ಮಾಡುತ್ತಿರುವುದರಿಂದ ರಾಜ್ಯದ ಆಡಳಿತ ಹಾಗೂ ಜನತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇವರ ಕಿತ್ತಾಟ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ಇದನ್ನೆಲ್ಲಾ ಸರಿಪಡಿಸಿಕೊಳ್ಳುವಂತೆ ಸಿಎಂಗೆ ನಾನು ಮೊದಲೇ ಹೇಳಿದ್ದೆ, ಬಿಜೆಪಿಯವರ ತಪ್ಪುಗಳು ಬಹಳಷ್ಟಿದ್ದು ಇದರಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಸದಾ ಸಿದ್ಧ: ಕಾಂಗ್ರೆಸ್ ಚುನಾವಣೆ ಎದುರಿಸಲು ಯಾವಾಗಲು ಸಿದ್ಧ. ನಾವೇನು ಅಧಿಕಾರ ಬಿಟ್ಟು ಕೆಳಗೆ ಇಳಿಯಿರಿ ಎಂದು ಬಿಜೆಪಿಯವರಿಗೆ ಹೇಳುತ್ತಿಲ್ಲ. ಇನ್ನೂ ಒಂದೂವರೆ ವರ್ಷ ಆಡಳಿತ ನಡೆಸಲಿ. ಯಡಿಯೂರಪ್ಪ ಅವರೇ ಅಧಿಕಾರ ಪೂರ್ಣ ಮಾಡಬೇಕು. ಅವರು ತಪ್ಪುಗಳನ್ನು ಮಾಡಿದರೆ ನಮಗೆ ಲಾಭವಾಗಲಿದೆ ಎಂದು ಪರಮೇಶ್ವರ್ ಮಾರ್ಮಿಕವಾಗಿ ಹೇಳಿದರು.

ಸರ್ಕಾರದ ಆಡಳಿತ ಬಿಗಿಯಾಗಿದ್ದರೆ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 33 ಜನ ಸಾವನ್ನಪ್ಪುತ್ತಿರಲಿಲ್ಲ. ಜನರ ಜೀವದ ಜತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದು ಇದನ್ನು ಗಮನಿಸಿದರೆ ಸರ್ಕಾರದ ಆಡಳಿತ ಬಿಗಿಯಾಗಿಲ್ಲ ಎಂಬುದು ತಿಳಿಯುತ್ತದೆ. ಸರ್ಕಾರ ಜಿಪಂಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಕಾಮಗಾರಿಗಳು ಮಾಡಿರುವ 15 ಸಾವಿರ ಕೋಟಿ ಬಿಲ್‌ಗಳು ಬಾಕಿ ಇವೆ. ಪಿಡಬ್ಯೂ ್ಲಡಿ ಇಲಾಖೆ ಒಂದರದ್ದೇ 5 ಸಾವಿರ ಕೋಟಿ ಬಾಕಿ ಇದೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.

ಪೆಗಾಸಸ್ ಸ್ಪೈವೇರ್ ಬಳಸಿ ಹ್ಯಾಕ್ ಮಾಡಿದ್ದರೂ ಸರ್ಕಾರ ಮೌನವೇಕೆ? : ರಾಜಕೀಯ ನೇತಾರರು, ಪತ್ರಕರ್ತರು ಸೇರಿ ಗಣ್ಯಾತಿಗಣ್ಯರ ಮೊಬೈಲ್ ಫೋನ್‌ಗಳನ್ನು ಪೆಗಾಸಸ್ ಸ್ಪೈವೇರ್ ಬಳಸಿ ಹ್ಯಾಕ್ ಮಾಡಿರುವುದು ನಿಜಕ್ಕೂ ಆತಂಕಕಾರಿ ಎನಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ತರಹದ ಸುದ್ದಿ ಹರಿದಾಡುತ್ತಿದ್ದರೂ ಕೇಂದ್ರ ಸರ್ಕಾರ ಮೌನವಾಗಿರುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವದಾದ್ಯಂತ 50 ಸಾವಿರಕ್ಕೂ ಹೆಚ್ಚು ಫೋನ್ ನಂಬರ್‌ಗಳನ್ನು ಪೆಗಾಸಸ್ ಸ್ಪೈವೇರ್ ಬಳಸಿ ಮಾಹಿತಿ ಕದಿಯಲು ದೊಡ್ಡ ಷಡ್ಯಂತ್ರ ನಡೆದಿರುವುದು ಎಲ್ಲರಲ್ಲೂ ಆತಂಕ ತಂದೊಡ್ಡಿದೆ. ದೇಶಾದ್ಯಂತ ಹಲವು ಸರ್ಕಾರಗಳು ಈ ಸ್ನೂಪ್‌ಗೆ ಬಲಿಯಾಗಿದ್ದು ಎಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುತ್ತಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸಬೇಕು. ಈ ತರಹದ ಬೆಳವಣಿಗೆಗೆಯನ್ನು ದೇಶದ ಜನರು ಎಂದೂ ನಿರೀಕ್ಷಿಸಿರಲಿಲ್ಲ. ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಿ, ಇದರ ಹಿಂದಿನ ಷಡ್ಯಂತ್ರವನ್ನು ಭೇದಿಸಿ ಸತ್ಯ ತಿಳಿಸಬೇಕು ಎಂದು ಪ್ರತಿಕ್ರಿಯಿಸಿದರು.

ದೇಶದಲ್ಲಿ ಜಾತಿ, ಹಣದ ಮೇಲೆ ರಾಜಕಾರಣ ನಡೆಯುತ್ತಿದೆ ಎಂಬುದು ಎಲ್ಲರಿಗೆ ಗೊತ್ತಿರುವಂತಹದ್ದು. ಇದನ್ನು ಹೊರತುಪಡಿಸಿ ಕರ್ನಾಟಕದ ರಾಜಕಾರಣ ನಡೆಯಬೇಕು ಎಂಬುದು ನಮ್ಮೆಲ್ಲರ ಬಯಕೆ. ಎಂ.ಬಿ.ಪಾಟೀಲ ಹಾಗೂ ಶಾಮನೂರು ಶಿವಶಂಕರಪ್ಪ ಅವರು ಬೇರೆ ಬೇರೆ ಕಾರಣಗಳಿಗೆ ಯಡಿಯೂರಪ್ಪಗೆ ಬೆಂಬಲಿಸಿರಬಹುದು. ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ