ಮಂಡ್ಯ: ಇತ್ತೀಚಿಗೆ ಮಳವಳ್ಳಿ ತಾಲೂಕಿನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡು ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದರು.
ಆಸ್ಪತ್ರೆಯ ವಿವಿಧ ವಾರ್ಡ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಳವಳ್ಳಿ ಕ್ಷೇತ್ರದ ಜನರ ಆರೋಗ್ಯ ವಿಚಾರಿಸಿ, ಮಿಮ್ಸ್ ವೈದ್ಯರಿಂದ ಚಿಕಿತ್ಸೆಯ ಮಾಹಿತಿ ಪಡೆದರು. ಅಂತೆಯೇ ಗಾಯಾಳುಗಳಿಗೆ ಇನ್ನೂ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಮದುವೆಗೆ ತೆರಳುತ್ತಿದ್ದ ಮಳವಳ್ಳಿ ಕ್ಷೇತ್ರದ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದರು. ಅವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಕೆಲವರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಇನ್ನು ಕೆಲವರಿಗೆ ಮೂಳೆ ಚಿಕಿತ್ಸೆ ಮಾಡಬೇಕಿದೆ. ಅವರ ಗಾಯ ವಾಸಿಯಾದ ನಂತರ ಶಸ್ತ್ರಚಿಕಿತ್ಸೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ. ವೈದ್ಯರು ಎಲ್ಲರಿಗೂ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಈಗಾಗಲೇ ಅಪಘಾತದಲ್ಲಿ ಮೃತಪಟ್ಟವರಿಗೆ ರಾಜ್ಯ ಸರ್ಕಾರದಿಂದ ಹಾಗೂ ವೈಯಕ್ತಿಕವಾಗಿ ಪರಿಹಾರ ನೀಡಲಾಗಿದೆ. ಗಾಯಾಳುಗಳಿಗೆ ಇನ್ನೂ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದೇನೆ ಎಂದರು.
ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಪಿ.ವಿ.ಶ್ರೀಧರ್, ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜ್, ಯುವ ಕಾಂಗ್ರೆಸ್ ಅಧ್ಯಕ್ಷ ತಳಗವಾದಿ ವಿಶ್ವ ಮತ್ತಿತರರಿದ್ದರು.