ಚಳ್ಳಕೆರೆ: ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳ ಆಸಕ್ತಿ ಸಮಾಜಕ್ಕೆ ಮಾದರಿ ಆಗುವಂತಿರಬೇಕು ಎಂದು ಶಾಸಕ ಟಿ. ರಘುಮೂರ್ತಿ ಅಭಿಪ್ರಾಯಪಟ್ಟರು.
ನಗರದ ಬಿಎಂಜಿಎಚ್‌ಎಸ್ ಶಾಲಾ ಆವರಣದಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದರೇ ಉಜ್ವಲ ಭವಿಷ್ಯ ಕಂಡುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕ್ರೀಡಾ ವಲಯದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆದರ್ಶವಾಗಿ ಬೆಳೆಯಲು ತಾಲೂಕು ಹಂತದಲ್ಲಿ ಉತ್ತಮ ಸಾಧನೆ ಮಾಡಬೇಕು. ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಇರಬೇಕು.
ಉತ್ತಮ ನಾಯಕತ್ವ ಗುಣ ಬೆಳೆಸುವ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳ ಬದುಕಿನ ಬದಲಾವಣೆಗೆ ಸಹಕಾರಿಯಾಗಬೇಕು ಎಂದರು.
ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ ಸರ್ಕಾರ ಜಾರಿ ಮಾಡುವ ವಿಶೇಷ ವಿದ್ಯಾರ್ಥಿ ವೇತನ ಮತ್ತು ಸೌಲಭ್ಯಗಳನ್ನು ಅರ್ಹರು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಬಿಇಒ ಕೆ.ಎಸ್.ಸುರೇಶ್, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ, ಸದಸ್ಯರಾದ ಕವಿತಾ, ಸುಮ, ಶಿಕ್ಷಕರಾದ ಸಿ.ಟಿ.ವೀರೇಶ್, ರಾಜಣ್ಣ, ಗುರುಮೂರ್ತಿ, ಬಿ.ರಾಜಕುಮಾರ್, ಓಬಣ್ಣ ಇತರರಿದ್ದರು.