ಮಂಡ್ಯ: ಜನರು ಸಮಸ್ಯೆಗಳು ಅಥವಾ ಸರ್ಕಾರಿ ಸೌಲಭ್ಯ ಪಡೆಯಲು ಮಧ್ಯವರ್ತಿಗಳನ್ನು ಅವಲಂಬಿಸುವುದು ಬೇಡ ಎಂದು ಶಾಸಕ ರವಿಕುಮಾರ್ ಗಣಿಗ ಕಿವಿಮಾತು ಹೇಳಿದರು.
ನಗರದ ಕಾವೇರಿ ಭವನದಲ್ಲಿ ಶಾಸಕರ ಕಚೇರಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೌಲಭ್ಯ ಪಡೆಯಲು ನೇರವಾಗಿ ನನ್ನ ಕಚೇರಿಯನ್ನು ಸಂಪರ್ಕಿಸಿ. ಅಂತೆಯೇ ಸಮಸ್ಯೆಗಳಿದ್ದರೆ ಅದನ್ನು ಅರ್ಜಿ ಸಲ್ಲಿಸಿ. ಇದಕ್ಕಾಗಿ ಮಧ್ಯವರ್ತಿಗಳನ್ನು ಅವಲಂಬಿಸುವುದು ಬೇಡ ಎಂದು ಸಲಹೆ ನೀಡಿದರು.
ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಕಚೇರಿ ತೆರೆಯಲಾಗಿದೆ. ಇಲ್ಲಿ ಸಿಬ್ಬಂದಿ ಕೂಡ ಇರುತ್ತಾರೆ. ಸಮಸ್ಯೆಗಳ ಅರ್ಜಿಯನ್ನು ಕಚೇರಿಗೆ ಸಲ್ಲಿಸಿ. ಮಂಡ್ಯದಲ್ಲಿ ಇರುವಾಗ ಕಚೇರಿಯಲ್ಲಿ ಲಭ್ಯವಿರುತ್ತೇನೆ. ಆ ವೇಳೆ ನೇರವಾಗಿ ನನ್ನನ್ನು ಭೇಟಿ ಮಾಡಬಹುದು. ಅಂತೆಯೇ ಸಾರ್ವಜನಿಕರು ಸಲ್ಲಿಸುವ ದೂರು ಅಥವಾ ಅರ್ಜಿಯನ್ನು ಪರಿಶೀಲಿಸಿ ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಕಚೇರಿ ಉದ್ಘಾಟಿಸಿದರು. ಡಿವೈಎಸ್ಪಿ ಶಿವಮೂರ್ತಿ, ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿ ಇತರರಿದ್ದರು. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಶಾಸಕರಿಗೆ ಬೂದುಗುಂಬಳದಲ್ಲಿ ದೃಷ್ಟಿ ತೆಗೆದಿದ್ದು ವಿಶೇಷವಾಗಿತ್ತು.