ಜಿಲ್ಲೆ

ಪ್ರವಾಸೋದ್ಯಮಕ್ಕೆ ಕಾಯಕಲ್ಪ ಕೊಡಲು ಚಿಂತನೆ: ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಶ್ರೀರಂಗಪಟ್ಟಣ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಹೊಸ ಕಾಯಕಲ್ಪ ನೀಡಲು ಚಿಂತಿಸಲಾಗಿದೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ನಗರದ ತಾಲೂಕು ಕಚೇರಿ ಸಮೀಪ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಚೇರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪಾರಂಪರಿಕ ಮತ್ತು ಐತಿಹಾಸಿಕ ಸ್ಥಳವಾಗಿರುವ ಶ್ರೀರಂಗಪಟ್ಟಣ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.

ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಕ್ಷೇತ್ರ ಮತ್ತು ಜಿಲ್ಲೆಯ ಅಭಿವೃದ್ದಿಗೆ ಕಾರ್ಯಕ್ರಮಗಳನ್ನು ರೂಪಿಸಿ ಅಭಿವೃದ್ಧಿ ಮಾಡಲಾಗುವುದು. ಜಿಲ್ಲೆಯ ಅಭಿವೃದ್ದಿಯೇ ನಮ್ಮ ಮುಖ್ಯ ಗುರಿ. ಕೊತ್ತತ್ತಿ ಹೋಬಳಿ ಅವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದ ಅವರು, ಸಾರ್ವಜನಿಕರ ಸಮಸ್ಯೆ ಆಲಿಸಲು ನಗರದಲ್ಲಿ ಶಾಸಕರ ಕಚೇರಿ ತೆರೆಯಲಾಗಿದೆ. ಜನಸಾಮಾನ್ಯರ ಕುಂದು ಕೊರತೆಗಳಿಗೆ ಅಧಿಕಾರಿಗಳ ಮೂಲಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲಾಗಿದೆ. ಸೇವೆ ಮಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ನುಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿ.ಪಂ ಮಾಜಿ ಸದಸ್ಯ ಚೀರನಹಳ್ಳಿ ಮಂಜುನಾಥ್, ಗ್ರಾ.ಪಂ ಸದಸ್ಯೆ ಸುವರ್ಣವತಿ, ಸೂನಗನಹಳ್ಳಿ ಸುರೇಶ್, ಹಳುವಾಡಿ ವೆಂಕಟೇಶ್, ಮಾರಸಿಂಗನಹಳ್ಳಿ ತಿಮ್ಮೇಗೌಡ ಇತರರಿದ್ದರು.