ಹಗರಿಬೊಮ್ಮನಹಳ್ಳಿ: ಮಕ್ಕಳ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಕಾಳಜಿ ವಹಿಸುವ ಶಿಕ್ಷಕ ಬಳಗಕ್ಕೆ ಪತ್ರಕರ್ತರು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು.
ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಮೈದಾನದಲ್ಲಿ ಶಿಕ್ಷಕರ ದಿನದ ನಿಮಿತ್ತ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶಿಕ್ಷಕರಿಗಾಗಿ ಎರಡು ದಿನಗಳ ಕಾಲ ಏರ್ಪಡಿಸಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆ ಶಿಕ್ಷಕರ ಮಾನಸಿಕ ವಿಕಸನ, ಒತ್ತಡ ನಿರ್ವಹಣೆಗೆ ಸಹಕಾರಿಯಾಗಿದೆ. ನಿತ್ಯ ಶಾಲಾ ಚಟುವಟಿಕೆಯಲ್ಲಿ ನಿರತರಾಗಿದ್ದ ಶಿಕ್ಷಕರು, ಮಕ್ಕಳಂತೆ ಮೈದಾನದಲ್ಲಿ ಆಟವಾಡುವುದರಿಂದ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗಲಿದೆ. ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಸ್ಪರ್ಧಾತ್ಮಕ ಮನೋಭಾವ ವೃದ್ಧಿಯಾಗಲಿದೆ. ಸ್ಪರ್ಧೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆಗೆ ಆದ್ಯತೆ ನೀಡಬೇಕಿದೆ ಎಂದರು.
ಬಿಇಒ ಮೈಲೇಶ್ ಬೇವೂರು ಮಾತನಾಡಿ, ರಾಜ್ಯದಲ್ಲಿ ಶಿಕ್ಷಕರಿಗೆ ಇಂತಹ ಕಾರ್ಯಕ್ರಮವನ್ನು ಮಾಧ್ಯಮದವರು ಏರ್ಪಡಿಸಿರುವುದು ಮೊದಲ ಬಾರಿಗೆ ಕಂಡಿದ್ದೇನೆ. ಶಿಕ್ಷಕರಷ್ಟೇ ಪವಿತ್ರವಾದ ವೃತ್ತಿ ಮತ್ರಿಕೋದ್ಯಮ. ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸಿದರೆ, ಪತ್ರಕರ್ತರು ಸಮಾಜದ ಭವಿಷ್ಯ ಕಾಪಾಡಲಿದ್ದಾರೆ. ಸಾಮಾಜಿಕ ಹೊಣೆಗಾರಿಕೆಯಲ್ಲಿ ಎರಡು ವೃತ್ತಿಯ ಪವಿತ್ರತೆಗೆ ಸಾಮಿಪ್ಯವಿದೆ ಎಂದರು.
ಬಿಆರ್‌ಸಿ ಅಧಿಕಾರಿ ಎಂ.ಎಸ್.ಪ್ರಭಾಕರ್, ಅಕ್ಷರ ದಾಸೋಹ ಎಡಿ ರವಿನಾಯ್ಕ, ರಾಜ್ಯ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ಎಂ. ಮಂಜುನಾಥ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಲೋಕಪ್ಪ, ಕಾರ್ಯದರ್ಶಿ ಬಿ.ಕೊಟ್ರಪ್ಪ, ಖಜಾಂಚಿ ಟಿ.ಸೋಮಶೇಖರ್, ಇಟಗಿ ಮಂಜುನಾಥ, ಇಟಗಿ ಪ್ರಭಾಕರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವಿಚಂದ್ರ ನಾಯ್ಕ, ದೈಹಿಕ ಶಿಕ್ಷಣಾಧಿಕಾರಿ ಕೊಟ್ರೇಶಪ್ಪ, ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಬುಡ್ಡಿ ಬಸವರಾಜ್, ತಾಲೂಕು ಅಧ್ಯಕ್ಷ ಉಮಾಪತಿ ಶೆಟ್ಟರ್, ಪತ್ರಕರ್ತರಾದ ಜೆ.ನಾಗರಾಜ್, ಸಿ.ಶಿವಾನಂದ್, ವಿಶ್ವನಾಥ ಭಾವಿಕಟ್ಟಿ ಇತರರಿದ್ದರು.