ಮಳವಳ್ಳಿ: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರ ಪ್ರಭುಗಳು ನನ್ನ ಮೇಲೆ ನಂಬಿಕೆಯಿಟ್ಟು ಅಭೂತಪೂರ್ವವಾಗಿ ಆಶೀರ್ವದಿಸಿರುವುದಕ್ಕೆ ಧನ್ಯವಾದ ಸಲ್ಲಿಸುವುದರ ಜತೆಗೆ ನಿರೀಕ್ಷೆಯಂತೆ ತಾಲೂಕನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಮೂಲಕ ಜನರ ಋಣ ತೀರಿಸುತ್ತೇನೆಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಈ ಹಿಂದಿನ ಜಡತ್ವದ ಆಡಳಿತ ವ್ಯವಸ್ಥೆಯಿಂದ ಹೊರಬಂದು ಸಾರ್ವಜನಿಕರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡುವುದರ ಜತೆಗೆ ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗಿ ಸ್ಪಂದಿಸಬೇಕೆಂದು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಎಚ್ಚರಿಕೆಯ ಸೂಚನೆ ನೀಡಲಾಗಿದೆ ಎಂದರು.
ಹಿಂದಿನ ನನ್ನ ಅಧಿಕಾರಾವಧಿಯಲ್ಲಿ ಆದಂತಹ ಸಣ್ಣಪುಟ್ಟ ತಪ್ಪುಗಳು ಮರುಕಳಿಸದಂತೆ ಎಲ್ಲ ಸಮುದಾಯಗಳಿಗೂ ಸಮಾನತೆಯಿಂದ ನ್ಯಾಯ ದೊರಕಿಸಿಕೊಡುವ ಆಡಳಿತ ನಡೆಸುತ್ತೇನೆ. ಇದಕ್ಕೆ ನಮ್ಮ ಕಾರ್ಯಕರ್ತರು ಹಾಗೂ ಮುಖಂಡರ ಸಲಹೆ ಸಹಕಾರ ಪಡೆದುಕೊಂಡು ದರ್ಪ, ದೌರ್ಜನ್ಯಕ್ಕೆ ಕ್ಷೇತ್ರದಲ್ಲಿ ಅವಕಾಶ ಮಾಡಿಕೊಡದಂತೆ ಅಭಿವೃದ್ಧಿ ಮತ್ರವೊಂದನ್ನೇ ಮಾನದಂಡವಾಗಿಟ್ಟುಕೊಂಡು ಕೆಲಸ ಮಾಡುತ್ತೇನೆ ಎಂದರು.
ಮೊದಲಿಗೆ ನನೆಗುದಿಗೆ ಬಿದ್ದಿರುವ ಹಲವು ಕಾಮಗಾರಿಗಳನ್ನು ಮುಂದುವರಿಸುವುದರ ಜತೆಗೆ ಸರ್ಕಾರದಿಂದ ಹೊಸ ಯೋಜನೆಗಳನ್ನು ತಂದು ಅಭಿವೃದ್ಧಿ ಕೆಲಸ ಮಾಡಿಸಲಾಗುವುದು. ಪ್ರತಿ ತಿಂಗಳು ನಾಲ್ಕು ದಿನ ಹೋಬಳಿ ಮಟ್ಟದಲ್ಲಿ ಸಾರ್ವಜನಿಕರ ಸಭೆ ನಡೆಸಿ ಕುಂದುಕೊರತೆ ಗಳನ್ನು ಆಲಿಸಿ ನಿವಾರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದ ಅವರು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜನರಿಗೆ ನೀಡಿದ್ದ ಭರವಸೆಗಳ ಗ್ಯಾರಂಟಿಗಳನ್ನು ನೀಡಲು ಈಗಾಗಲೇ ಮಖ್ಯಮಂತ್ರಿ ಮೊದಲ ಸಂಪುಟ ಸಭೆಯಲ್ಲೇ ತಾತ್ವಿಕ ಅನುಮೋದನೆ ನೀಡಿದ್ದು, ವಿಪಕ್ಷಗಳು ಟೀಕಿಸದ ರೀತಿಯಲ್ಲಿ ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನ ತರಲಾಗುವುದು ಎಂದರು.
ವಾರದೊಳಗೆ ಪೂರ್ಣ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಸಚಿವರ ಆಯ್ಕೆ ನಡೆಯುತ್ತಿದೆ. ಸಮುದಾಯ, ಪ್ರದೇಶವಾರು ಸಚಿವ ಸ್ಥಾನಗಳನ್ನು ಹಂಚಿಕೆ ಮಾಡಲಾಗುತ್ತಿದೆ. ನನಗೂ ಸಚಿವ ಸ್ಥಾನ ಸಿಗುವ ಭರವಸೆ ಇದೆ. ಒಂದು ಬೇಳೆ ಸಿಗದಿದ್ದರೂ ಬೇಸರಿಸಿಕೊಳ್ಳದೆ ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ ಎಂದರು.
ಪೂರಿಗಾಲಿ ಹನಿ ನೀರಾವರಿ ಯೋಜನೆ ನನ್ನ ಕನಸಿನ ಕೂಸಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಕಾಮಗಾರಿ ಸ್ಥಿತಿಗತಿ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಕಾರ್ಯಗತಗೊಳಿಸಲು ಮೊದಲ ಆದ್ಯತೆ ನೀಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಟಿಎ ಪಿಸಿಎಂಎಸ್ ಅಧ್ಯಕ್ಷ ದ್ಯಾಪೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುಂದ್ರಾಜು, ದೇವರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಷ್, ತಾಪಂ ಮಾಜಿ ಅಧ್ಯಕ್ಷ ನಾಗೇಶ್, ಪುರಸಭೆ ಸದಸ್ಯ ಶಿವಕುಮಾರ್ ಮತ್ತಿತರರಿದ್ದರು.