ಜಿಲ್ಲೆ

'ಎಷ್ಟು ಕರೆ ಮಾಡಿದ್ರೂ ಸ್ವೀಕರಿಸದ ರೋಹಿಣಿ ಸಿಂಧೂರಿ ಒಂದೇ ಮೆಸೇಜ್​ಗೆ ಅವರೇ ಫೋನ್​ ಮಾಡಿದ್ರು'

ಚಾಮರಾಜನಗರ: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಗೆಗಿನ ಸ್ವಾರಸ್ಯಕರ ಪ್ರಸಂಗವೊಂದನ್ನು ಬಿಚ್ಚಿಡುವ ಮೂಲಕ ಕೊಳ್ಳೇಗಾಲ ಶಾಸಕ ಎನ್. ಮಹೇಶ್​ ಕೆಡಿಪಿ ಸಭೆಯಲ್ಲಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.

ಸೋಮವಾರ ಚಾಮರಾಜನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರಿನ ಯೋಜನೆ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು, ನಾನು ಕುಡಿಯುವ ನೀರಿನ ಯೋಜನೆ ಕುರಿತು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಹಲವಾರು ಬಾರಿ ಫೋನ್ ಕರೆ ಮಾಡಿದೆ. ಆದರೆ, ಅವರು ಸ್ವೀಕರಿಸಲಿಲ್ಲ. ಬಳಿಕ ಒಂದೇ ಒಂದು ಮೆಸೇಜ್ ಮಾಡಿದ ಬೆನ್ನಲ್ಲೇ ಅವರಾಗಿಯೇ ನನಗೆ ಫೋನ್ ಮಾಡಿದರು ಎಂದರು.

ಅಂದಹಾಗೆ ಶಾಸಕರು ಮಾಡಿದ ಆ ಮಸೇಜ್​ ಯಾವುದೆಂದರೆ, "ನಾನು ಕೊಳ್ಳೇಗಾಲ ಎಂಎಲ್ಎ ಎನ್. ಮಹೇಶ್, ಸಾರಾ ಮಹೇಶ್ ಅಲ್ಲ ಎಂದು ಮೆಸೇಜ್ ಮಾಡಿದರಂತೆ. ಆ ಬಳಿಕವಷ್ಟೇ ರೋಹಿಣಿ ಅವರು ತಾನಾಗಿಯೇ ಪೋನ್ ಮಾಡಿದ್ರು ಎಂದು ಶಾಸಕರು ಮಾತು ಹೇಳ್ತಿದ್ದಂತೆ ಕೆಡಿಪಿ ಸಭೆ ನಗೆಗಡಲಲ್ಲಿ ತೇಲಿತು.

ಇನ್ನು ಸಾರಾ ಮಹೇಶ್​ ಮತ್ತು ರೋಹಿಣಿ ಸಿಂಧೂರಿ ನಡುವೆ ಆಗಾಗ ಒಂದಲ್ಲ ಒಂದು ವಿಚಾರಕ್ಕೆ ವಾಗ್ವಾದ ನಡೆಯುವುದು ಸಾಮಾನ್ಯವಾಗಿದೆ. ಮೈಸೂರಿಗೆ ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಅವರು ನೇಮಕವಾಗುತ್ತಿದ್ದಂತೆ ಮೊದಲು ಅದರ ವಿರುದ್ಧ ಧ್ವನಿಯೆತ್ತಿದ್ದೇ ಸಾರಾ ಮಹೇಶ್​. ಅಲ್ಲದೆ, ಸಭೆಗಳಲ್ಲಿಯೂ ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪ ಮಾಡುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎನ್​ ಮಹೇಶ್​ ನಗೆ ಚಟಾಕಿ ಹಾರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)