ಚಿಕ್ಕಬಳ್ಳಾಪುರ: ಸೋಲಿನ ಭೀತಿಯಿಂದ ಸಂಸದ ಪ್ರತಾಪ್ ಸಿಂಹ ಏನೇನು ಮಾತನಾಡುತ್ತಿದ್ದಾರೆ. ಕೇಂದ್ರ ಆಹಾರ ನಿಗಮ ಸೇರಿದಂತೆ ವಿಷಯಾಧಾರಿತ ವಿಚಾರಗಳ ಚರ್ಚೆಗೆ ತಾಕತ್ ಇದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ.
ಮೊದಲ ಬಾರಿಗೆ ಗೆದ್ದಿರುವ ಶಾಸಕರಿಗೆ, ಗೊತ್ತಿಲ್ಲದವರಿಗೆ ಹಿರಿಯ ಶಾಸಕರ ಒರಿಯಂಟೇಶನ್ ಪ್ರೋಗ್ರಾಂ ನಡೆಸುವ ಅಗತ್ಯವಿದೆ ಎಂಬ ಪ್ರತಾಪ ಸಿಂಹ ಹೇಳಿಕೆಗೆ ಚಿಕ್ಕಬಳ್ಳಾಪುರ ನಗರದಲ್ಲಿ ತಿರುಗೇಟು ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಕಾಂಗ್ರೆಸ್ ಹಿರಿಯರ ಬಗ್ಗೆ ಮಾತನಾಡಿದಾಗ ದೊಡ್ಡ ನಾಯಕರಾಗುವ ಭಾವನೆ ಇದ್ದರೆ ಬಿಡುವುದು ಒಳಿತು. ಹಿಂದೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿಕೊಂಡು ಗೆದ್ದರು. ಈಗಲಾದರೂ ವೈಯಕ್ತಿಕ ವರ್ಚಸ್ಸು, ಸಾಧನೆಯ ಬಗ್ಗೆಯಾದರೂ ಮಾತನಾಡಲಿ, ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯ ಸೋಲಿನ ಭೀತಿ ಇದೆ ಎಂದರು.
ಪತ್ರಕರ್ತರಾಗಿದ್ದಾಗ ಪ್ರತಾಪ ಸಿಂಹ ಚೆನ್ನಾಗಿ ಓದುತ್ತಿದ್ದರು. ಸಂಸದರಾದ ಬಳಿಕ ಓದುವುದನ್ನು ಬಿಟ್ಟಿದ್ದಾರೆ. ಇದಕ್ಕೆ ಶೇಖರಣೆಯ ದವಸ ಧಾನ್ಯವನ್ನು ವ್ಯವಸ್ಥಿತ ರೀತಿಯಲ್ಲಿ ತಲುಪಿಸುವ ಕೇಂದ್ರ ಆಹಾರ ನಿಗಮವನ್ನು ಒಂದು ಗೋದಾಮಿಗೆ ಹೋಲಿಸಿದ್ದಾರೆ. ಮೊದಲು ಒಪ್ಪಿ, ಬಳಿಕ ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸಿರುವುದರ ಹಿಂದೆ ರಾಜ್ಯ ಬಿಜೆಪಿ ಸಂಸದರ ಕುತಂತ್ರವಿದೆ. ಲೋಕಸಭಾ ಚುನಾವಣೆಯಲ್ಲಿ ಸೋಲುವ ಭಯದಲ್ಲಿ ಅಡ್ಡಿಪಡಿಸುತ್ತಿದ್ದಾರೆ.
* ಮುಂದೈತೆ ಮಾರಿಹಬ್ಬ ಸಂಸದರಿಗೆ
ಕೋಲಾರ ಸಂಸದ ಮುನಿಸ್ವಾಮಿ ಚೈಲಡೀಶ್ ಆಗಿ ವರ್ತಿಸುತ್ತಿದ್ದಾರೆ. ಅವರಿಗೆ ಮುಂದಿನ ವರ್ಷವೇ ಮಾರಿಹಬ್ಬ ಐತೆ ಎಂದು ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದರು.
ಸಂಸದರು ಎಂಬ ಅರಿವಿಲ್ಲದೇ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಗೆದ್ದರು ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಪ್ರಭಾವಿಗಳು ಕೆಲ ಕಾರಣಗಳ ಹಿನ್ನೆಲೆಯಲ್ಲಿ ಕೈ ಜೋಡಿಸಿ ಗೆಲ್ಲಿಸಿದ್ದರು. ಮುಂದಿನ ಚುನಾವಣೆಯಲ್ಲಿ ಸೋಲು ಗೆಲುವಿನ ಬಗ್ಗೆ ಗೊತ್ತಾಗುತ್ತದೆ. ನನಗೆ ೫ ವರ್ಷಗಳ ಬಳಿಕ ಚುನಾವಣೆ ಎದುರಾಗುತ್ತದೆ. ಆದರೆ, ಸಂಸದರಿಗೆ ಮುಂದಿನ ವರ್ಷವೇ ಚುನಾವಣೆಯ ಮಾರಿಹಬ್ಬ ಇದೆ ಎಂದರು.