ಹರಪನಹಳ್ಳಿ: ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿದ್ದು, ಮುಂದೆಯೂ ರಂಗ ಕಲೆಗೆ ಪ್ರೋತ್ಸಾಹ ನೀಡಲಾಗುವುದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ತಿಳಿಸಿದರು.
ಪಟ್ಟಣದ ಕಾಶಿ ಸಂಗಮೇಶ್ವರ ಮಠದ ಆವರಣದಲ್ಲಿ ಈಚೆಗೆ ಕತ್ತಲೆ ಬೆಳಕು ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕನ್ನಡ ಗಜಲ್, ರಂಗಗೀತೆ ಗಾಯನ ಮತ್ತು ಸೋರುತ್ತಿವುದು ಸಂಬಂಧ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ತಂದೆಯವರಾದ ದಿ.ಎಂ.ಪಿ.ಪ್ರಕಾಶ್ ಸ್ವತಃ ಸೂರ್ಯಶಿಕಾರಿ ನಾಟಕ ಅನುವಾದಿಸಿದ್ದಾರೆ. ನಾಟಕದಲ್ಲಿ ಅಭಿನಯಿಸುತ್ತಾ ಬಂದಿದ್ದು, ಸದಾ ನಾಟಕ, ಜಾನಪದ, ಸಾಂಸ್ಕೃತಿಕ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ಬಿಂಬಿಸಿಕೊಂಡಿದ್ದರು.
ನಂತರದ ದಿನಗಳಲ್ಲಿ ಸಹೋದರ ದಿ.ಎಂ.ಪಿ.ರವೀಂದ್ರ ಸಹ ಹೂವಿನ ಹಡಗಲಿಯಲ್ಲಿ ರಂಗ ಭಾರತಿ ಸಂಸ್ಥೆ ಕಟ್ಟುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿ, ಬೆಂಬಲಿಸಿದ್ದಾರೆ. ಅದೇ ರೀತಿ ನಾನು ಕೂಡ ವಿವಿಧ ರಾಜ್ಯಗಳಲ್ಲಿನ ಕಲೆಯನ್ನು ಸ್ಥಳೀಯ ಕಲಾವಿದರಿಂದ ತಾಲೂಕಿಗೆ ಪರಿಚಯಿಸಲು ಪ್ರಯತ್ನಿಸಲಾಗುವುದು ಎಂದರು.
ಜಿಪಂ ಮಾಜಿ ಸದಸ್ಯೆ ಸುವರ್ಣಾ ನಾಗರಾಜ ಮಾತನಾಡಿ, ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಾಟಕ, ಜಾನಪದ ಸಂಗೀತದಂತಹ ಕಾರ್ಯಕ್ರಮಗಳು ರಾತ್ರಿ ಪೂರ್ತಿ ನಡೆಯುತ್ತಿದ್ದವು. ಇಂದು ಎಲ್ಲರ ಕೈಗೆ ಮೊಬೈಲ್, ಟಿವಿ ಬಂದ ಮೇಲೆ ಅದರ ಆಸಕ್ತಿ ಕಡಿಮೆಯಾಗಿದೆ. ಇದರಿಂದ ವಿವಿಧ ರೀತಿಯ ಕಲಾವಿದರ ಪ್ರತಿಭೆ ಅನಾವರಣಕ್ಕೆ ವೇದಿಕೆಗಳು ಇಲ್ಲದಂತಾಗಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಕಲೆ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಉಳಿಸಿ, ಬೆಳೆಸುವ ಕೆಲಸಕ್ಕೆ ಮುಂದಾಗೋಣ ಎಂದರು.
ರಾಘವ ಕಮ್ಮಾರ ತಂಡದಿಂದ ಕನ್ನಡ ಮಧುರ ಗೀತೆಗಳು ಮತ್ತು ರಂಗ ಗೀತೆಗಳ ಗಾಯನ ನಡೆಯಿತು. ಮಂಜು ಸಿರಿಗೆರೆರವರ ತಂಡದಿಂದ ರಾಮದುರ್ಗ ಮಹಾಂತೇಶ್‌ರವರ ರಚನೆ ಮತ್ತು ನಿರ್ದೇಶನದ ಸೋರುತ್ತಿರುವುದು ಸಂಬಂಧ ನಾಟಕ ಪ್ರದರ್ಶನ, ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಳಿಸಿತು.
ಪುರಸಭೆ ಮಾಜಿ ಅಧ್ಯಕ್ಷ, ಸದಸ್ಯ ಎಂ.ವಿ.ಅಂಜಿನಪ್ಪ, ಪತ್ರಕರ್ತ ರಾಮಪ್ರಸಾದಗಾಂಧಿ, ವಕೀಲ ಅರುಂಡಿ ನಾಗರಾಜ, ಶಿಕ್ಷಕ ಎ. ಚನ್ನಪ್ಪ, ಎನ್.ಜಿ.ಬಸವರಾಜ, ಪಿ.ಕರಿಬಸಪ್ಪ, ಕತ್ತಲೆ ಬೆಳಕು ಟ್ರಸ್ಟ್ ಅಧ್ಯಕ್ಷ ಅರುಣ್‌ಕುಮಾರ ಮೇದಾರ, ಉಪಾಧ್ಯಕ್ಷೆ ಟಿ.ಶ್ಯಾಮಲಾ, ಕಾರ್ಯದರ್ಶಿ ಕೆ.ಕಾರ್ತಿಕ, ನವೀನ ಇತರರಿದ್ದರು.