ಕೆ.ಆರ್.ಪೇಟೆ: ತಾಲೂಕಿನ ಕಂದಾಯ ಮತ್ತು ಸರ್ವೇ ಇಲಾಖೆಗಳಿಂದ ರೈತ ಸಮುದಾಯಕ್ಕೆ ಅಪಾರ ಕಿರುಕುಳವಾಗುತ್ತಿದ್ದು, ಅಧಿಕಾರಿಗಳು ಮತ್ತು ಗ್ರಾಮ ಆಡಳಿತಾಧಿಕಾರಿಗಳು ರೈತರ ಸುಲಿಗೆ ನಿಲ್ಲಿಸಿ, ಬದ್ಧತೆಯಿಂದ ಕೆಲಸ ಮಾಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆಂದು ಶಾಸಕ ಎಚ್.ಟಿ.ಮಂಜು ಎಚ್ಚರಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಸಭೆ ನಡೆಸಿ ರೈತರ ಕುಂದುಕೊರತೆಗಳ ಪರಿಶೀಲನೆ ನಡೆಸಿ ಮಾತನಾಡಿದರು.
ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಮತ್ತು ರೆವಿನ್ಯೂ ಅಧಿಕಾರಿಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ರೈತರು ನೀಡಿದ ಲಿಖಿತ ದೂರುಗಳನ್ನು ಸಭೆಯಲ್ಲಿಟ್ಟು ಚರ್ಚೆ ನಡೆಸಿದ ಶಾಸಕರು, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಹರಿಹಾಯ್ದರು.
ಪೌತಿ ಖಾತೆ ಮಾಡಿಸಿಕೊಳ್ಳಲು ರೈತರು ನಿರಂತರವಾಗಿ ಕಂದಾಯ ಇಲಾಖೆಗೆ ಸುತ್ತುತ್ತಿದ್ದಾರೆ. ತಾಲೂಕಿನ ಕಟ್ಟಹಳ್ಳಿ ಗ್ರಾಮದ ರೈತರೊಬ್ಬರು ಒಂದು ಆರ್‌ಟಿಸಿ ತಿದ್ದುಪಡಿಗೆ ಕಳೆದ ಮೂರುವರೆ ವರ್ಷಗಳಿಂದ ಅಲೆದಾಡುತ್ತಿದ್ದಾರೆ. ತಾಲೂಕಿನ ಶೀಳನೆರೆ ಹೋಬಳಿಯ ಹೊಸೂರು ಗ್ರಾಮ ಸೇರಿದಂತೆ ಸುಮಾರು 20 ಹಳ್ಳಿಗಳ ರೈತರ ಭೂಮಿಗೆ ಎಂ.ಆರ್ ಇಲ್ಲ. ಸರ್ಕಾರಿ ದಾಖಲೆಯಲ್ಲಿ ಎಂ.ಆರ್ ದಾಖಲಾತಿ ಮಾಡದಿದ್ದರೆ ರೈತರು ತಮ್ಮಲ್ಲಿ ಇಲ್ಲದ ಎಂ.ಆರ್. ದಾಖಲಾತಿಯನ್ನು ಎಲ್ಲಿಂದ ತರಬೇಕು. ದುರ್ಬಲರು ತಮ್ಮ ಜಮೀನಿನ ಹದ್ದುಬಸ್ತು ಮಾಡಿಸಿಕೊಳ್ಳಲು ಆಗುತ್ತಿಲ್ಲ. ಸರ್ವೇ ಅಧಿಕಾರಿಗಳು ಅಳತೆ ಮಾಡಿ ಕಲ್ಲು ನೆಟ್ಟರೆ ಸರ್ವೇ ಕಲ್ಲುಗಳನ್ನೇ ಕಿತ್ತುಹಾಕಿ ಕೆಲವರು ದುರ್ಬಲರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ತಾಲೂಕು ಆಡಳಿತ ದಬ್ಬಾಳಿಕೆ ಮಾಡುವವರನ್ನು ಕಾನೂನು ಚೌಕಟ್ಟಿನಲ್ಲಿ ನಿಯಂತ್ರಿಸುವ ಕೆಲಸ ಮಾಡುತ್ತಿಲ್ಲ ಎಂದರು.
ತಹಸೀಲ್ದಾರರು ಕೇವಲ ಆದೇಶ ಮಾಡಿದರೆ ಸಾಲದು. ತಾವು ಮಾಡಿದ ಆದೇಶವನ್ನು ಜಾರಿಗೊಳಿಸುವ ಕೆಲಸ ಮಾಡಬೇಕು. ಭ್ರಷ್ಟ ಸರ್ಕಾರಿ ನೌಕರರನ್ನು ನಿಯಂತ್ರಿಸುವ ಕೆಲಸ ಮಾಡಬೇಕು. ಪೌತಿ ಖಾತೆ, ಜಮೀನು ದುರಸ್ತು ಸೇರಿದಂತೆ ಸಣ್ಣಪುಟ್ಟ ಕೆಲಸಗಳಿಗೂ ರೈತರು ಅರ್ಜಿ ಹಿಡಿದು ಕ್ಷೇತ್ರದ ಶಾಸಕರ ಮನೆ ಬಾಗಿಲಿಗೆ ಬರುತ್ತಿದ್ದಾರೆಂದರೆ ಸರ್ಕಾರಿ ನೌಕರರರಾಗಿ ನೀವು ಮಾಡುತ್ತಿರುವುದಾದರೂ ಏನು? ಗ್ರಾಮ ಆಡಳಿತಾಧಿಕಾರಿಗಳಿಂದ ಹಿಡಿದು ಕಂದಾಯ, ಸರ್ವೇ ಇಲಾಖೆ ಸೇರಿದಂತೆ ಎಲ್ಲ ನೌಕರರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ರೈತರೊಂದಿಗೆ ಸೌಜನ್ಯದ ನಡವಳಿಕೆ ಪ್ರದರ್ಶಿಸಬೇಕು. ಅಲ್ಲದೆ ಜನರ ಸುಲಿಗೆ ಮಾಡದೆ ತಮ್ಮ ಪಾಲಿನ ಕೆಲಸವನ್ನು ತ್ವರಿತವಾಗಿ ಮಾಡುವಂತೆ ಶಾಸಕರು ಸೂಚಿಸಿದರು.
ತಾಲೂಕಿನ ವಿಠಲಾಪುರ ವೃತ್ತದಲ್ಲಿ ಪ್ರಸ್ತುತ ಗ್ರಾಮ ಆಡಳಿತಾಧಿಕಾರಿಯಾಗಿ ಕರ್ತವ್ಯದಲ್ಲಿರುವ ಸುಮನ್, ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಹರಳಹಳ್ಳಿ ವೃತ್ತದಲ್ಲಿ ಮಹಿಳೆಯೊಬ್ಬರಿಗೆ ಪೌತಿ ಖಾತೆ ಮಾಡಿಕೊಡುವುದಾಗಿ ಮೂರು ಸಾವಿರ ರೂ. ಲಂಚ ಪಡೆದಿದ್ದ. ಈ ಹಣವನ್ನು ಮಹಿಳೆ ಮನೆಯಲ್ಲಿದ್ದ ಅಕ್ಕಿ ಮಾರಿ ಸುಮನ್ ಅವರಿಗೆ ನೀಡಿದ್ದರು. ಈ ವಿಷಯವನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಶಾಸಕರು, ಗ್ರಾಮ ಆಡಳಿತಾಧಿಕಾರಿ ಸುಮನ್ ಅವರನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ಲಂಚ ಪಡೆದಿದ್ದರೂ ಸುಮನ್ ತಾನು ಲಂಚ ಪಡೆದಿಲ್ಲ ಎಂದು ಸವಾಲು ಹಾಕುವ ವರ್ತನೆ ಪ್ರದರ್ಶಿಸಿದ. ಇದರಿಂದ ಕುಪಿತರಾದ ಶಾಸಕರು ತಕ್ಷಣವೇ ಮೊಬೈಲ್ ಮೂಲಕ ಲಂಚ ಕೊಟ್ಟಿದ್ದ ಮಹಿಳೆಯನ್ನು ಸಂಪರ್ಕಿಸಿ, ಆಕೆಯಿಂದಲೇ ಲಂಚ ಕೊಟ್ಟಿರುವ ಸತ್ಯವನ್ನು ಹೊರಗೆ ಹಾಕಿಸಿದರು. ಸತ್ಯ ಬಹಿರಂಗವಾಗುತ್ತಿದ್ದಂತೆಯೇ ಸುಮನ್ ಬಹಿರಂಗ ಕ್ಷಮೆಯಾಚಿಸಿ ತನ್ನ ಮನಸ್ಥಿತಿಯನ್ನು ಬದಲಿಸಿಕೊಳ್ಳುವುದಾಗಿ ತಿಳಿಸಿದರು.
ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್ ಮಾತನಾಡಿ. ಗ್ರಾಮ ಆಡಳಿತಾಧಿಕಾರಿಗಳು ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು. ಇವರು ಕೇವಲ ಪೋಸ್ಟ್‌ಮನ್‌ಗಳಂತೆ ಪೈಲುಗಳನ್ನು ಒಂದು ಟೇಬಲ್‌ನಿಂದ ಮತ್ತೊಂದು ಟೇಬಲ್‌ಗೆ ವರ್ಗಾಹಿಸುವ ಬದಲು ತಮ್ಮ ಹಂತದಲ್ಲಿಯೇ ಅಗತ್ಯ ದಾಖಲೆಗಳನ್ನು ಪಡೆದು ರೈತರ ಸಮಸ್ಯೆಗಳನ್ನು ಪರಿಹರಿಸಬೇಕು. ಭ್ರಷ್ಟಾಚಾರದ ವರದಿಗಳು ಪತ್ತೆಯಾದರೆ ಅಂತಹ ಸಿಬ್ಬಂದಿ ವಿರುದ್ದ ಶಿಸ್ತು ಕ್ರಮದ ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಎ.ಸಿ ಕಚೇರಿಯ ವ್ಯವಸ್ಥಾಪಕ ಪ್ರಕಾಶ್, ಕಂದಾಯ ಮತ್ತು ಸರ್ವೇ ಇಲಾಖೆಯ ಸಿಬ್ಬಂದಿ ಇದ್ದರು.