ಜಿಲ್ಲೆ

ಸುಂದರ ಮಂಡ್ಯ ನಿರ್ಮಾಣ ನಮ್ಮ ಜವಾಬ್ದಾರಿ: ಶಾಸಕ ರವಿಕುಮಾರ್ ಗಣಿಗ ಭರವಸೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಸುಂದರ ಮಂಡ್ಯ ನಗರ ಕಟ್ಟುವ ಜವಾಬ್ದಾರಿ ನಮ್ಮ ಮೇಲಿದೆ. ಮೂರುವರೆ ವರ್ಷದ ಅವಧಿಯಲ್ಲಿ ಅದನ್ನು ಸಾಕಾರಗೊಳಿಸಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಂಡ್ಯ ನಗರಕ್ಕೆ ಹೊಸ ರೂಪ ಕೊಡುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಅಮೃತ್ ಯೋಜನೆ-2 ಹಾಗೂ ಮುಖ್ಯಮಂತ್ರಿ ಅವರ ವಿಶೇಷ ಅನುದಾನ ಸೇರಿ 13 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುವುದು. ರಸ್ತೆ ಡಾಂಬರೀಕರಣ, ಒಳಚರಂಡಿ ಹಾಗೂ ಆಯ್ದ ವೃತ್ತವನ್ನು ಹೈಟೆಕ್‌ಗೊಳಿಸಲಾಗುವುದು ಎಂದರು.

ಸುಮಾರು 700 ಮೀಟರ್ ದೂರವಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆಯನ್ನು ಮೂರು ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಹೊಸದಾಗಿ ರಸ್ತೆ, ವಿದ್ಯುತ್ ದೀಪ ಅಳವಡಿಕೆ, ಪುಟ್‌ಪಾತ್ ನಿರ್ಮಾಣ, ರಸ್ತೆಯ ಒಂದು ಭಾಗದಲ್ಲಿ ಗಿಡ ನೆಟ್ಟು ಪೋಷಣೆ ಮಾಡುವ ಯೋಜನೆ ಇದಾಗಿದೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗುವುದು. ಒಟ್ಟಾರೆ ಇಡೀ ಜಿಲ್ಲೆಯಲ್ಲಿ ಇದೊಂದು ಮಾದರಿ ರಸ್ತೆಯನ್ನಾಗಿ ರೂಪಿಸಲಾಗುವುದು. ಅದರಂತೆ ಮುಂದಿನ ದಿನದಲ್ಲಿ ನೂರಡಿ ರಸ್ತೆ, ಹೊಸಹಳ್ಳಿ ವೃತ್ತ ಸೇರಿದಂತೆ ನಗರದ ವಿವಿಧೆಡೆ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದರು.

ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಅರುಣ್‌ಕುಮಾರ್, ಪೌರಾಯುಕ್ತೆ ಪಂಪಾಶ್ರೀ, ಮುಡಾ ಅಧ್ಯಕ್ಷ ನಹೀಂ ಇತರರಿದ್ದರು.