ಜಿಲ್ಲೆ

ಮರಳು ಸಮಸ್ಯೆಗೆ ವಾಸ್ತವ ಅಂಶ ಅರಿತು ನಿಯಮ ರೂಪಿಸಿ : ಶಾಸಕ ಕಾಮತ್ ಆಗ್ರಹ

Mangaluru - Hariprasad Rai


ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಕೆಂಪು ಕಲ್ಲು ಹಾಗೂ ಮರಳಿನ ತೀವ್ರ ಸಮಸ್ಯೆ ಬಗ್ಗೆ ಅಧಿವೇಶನದಲ್ಲಿ
ಶಾಸಕ ವೇದವ್ಯಾಸ ಕಾಮತ್ ಅವರು ಸರ್ಕಾರದ ಗಮನ ಸೆಳೆದಿದ್ದಾರೆ.
ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರ ಪ್ರಸ್ತಾವನೆಗೆ ಧ್ವನಿಗೂಡಿಸಿದ ಶಾಸಕ ಕಾಮತ್ ‘ ಗಣಿ ಇಲಾಖೆಯ ಅಧಿಕಾರಿಗಳು ಮಂಗಳೂರಿನ ವಸ್ತುಸ್ಥಿತಿ ಅರಿಯದೆ ಬೆಂಗಳೂರಿನಲ್ಲಿ ಕೂತು ಕಾನೂನು ರೂಪಿಸಿದರೆ ಇನ್ನಷ್ಟು ಗೊಂದಲ ಹೆಚ್ಚುವುದಲ್ಲದೇ ಪರಿಹಾರ ಸಿಗುವುದಿಲ್ಲ. ಅಧಿಕಾರಿಗಳು ಮಂಗಳೂರಿಗೆ ಬಂದು ವಾಸ್ತವ ಅಂಶಗಳನ್ನು ತಿಳಿದುಕೊಂಡು ನೀತಿ ನಿಯಮ ರೂಪಿಸಬೇಕು ’ಎಂದು
ಒತ್ತಾಯಿಸಿದರು.
ಜಿಲ್ಲೆಯ ಜನಪ್ರತಿನಿಧಿಗಳನ್ನು ಆಹ್ವಾನಿಸದೇ ಎರಡು ಮೂರು ಸಭೆಗಳನ್ನು ನಡೆಸಲಾಗಿದೆ. ಕಲ್ಲುಗಳನ್ನು ತೆಗೆಯುವಾಗ ಎಷ್ಟು ಜಾಗಗಳನ್ನು ಲೀಸ್‌ಗೆ ಪಡೆಯಲಾಗುತ್ತದೆ, ಎಷ್ಟು ಕಲ್ಲು ಉತ್ಪಾದಿಸಲಾಗುತ್ತದೆ ಹಾಗೂ ಅಲ್ಲಿರುವ ಸಮಸ್ಯೆಗಳನ್ನು ಗಮನದಲ್ಲಿರಿಸಿ
ಕಾನೂನು ರೂಪಿಸಬೇಕಾಗುತ್ತದೆ. ಜಿಲ್ಲೆಯಲ್ಲಿ ಎಲ್ಲ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಅದಕ್ಕೆ ಪೂರಕವಾಗಿ ಹೊಂದಿಕೊಂಡಂತಹ ಆರ್ಥಿಕ ವ್ಯವಸ್ಥೆಯೂ ಹದಗೆಟ್ಟಿದೆ. ಕೂಲಿ ಕಾರ್ಮಿಕರ ಸ್ಥಿತಿಯಂತೂ ಹೇಳ ತೀರದಾಗಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕಾಮತ್ ಆಗ್ರಹಿಸಿದರು.