ಜಿಲ್ಲೆ

ಪೂಂಜಾ ವಿರುದ್ಧ ಪ್ರಕರಣ ದಾಖಲು ಖಂಡನೀಯ : ಶಾಸಕ ವೇದವ್ಯಾಸ ಕಾಮತ್

Mangaluru - Hariprasad Rai





ಮಂಗಳೂರು : ಬೆಳ್ತಂಗಡಿಯ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ದೌರ್ಜನ್ಯಕ್ಕೀಡಾದ ಬಡ ಕುಟುಂಬದ ಪರ ನಿಂತ ಶಾಸಕ ಹರೀಶ್ ಪೂಂಜಾ ಅವರ ಮೇಲೆಯೇ ಸರ್ಕಾರ, ತನ್ನ ಅಧಿಕಾರಿಗಳ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಬಡವರು ಕಟ್ಟಿಕೊಂಡ ಮನೆಯನ್ನು ತೆರವುಗೊಳಿಸುವ ಮೊದಲು ನ್ಯಾಯಯುತವಾಗಿ ಅಳತೆ ಮಾಡಿಸಬೇಕು. ಅದು ಅರಣ್ಯ ಪ್ರದೇಶವಾಗಿದ್ದರೆ ತೆರವುಗೊಳಿಸಿ, ಅಲ್ಲದಿದ್ದರೆ ತೆರವುಗೊಳಿಸಬೇಡಿ ಎಂದು ಹೇಳಿದ್ದರಲ್ಲಿ ತಪ್ಪೇನಿದೆ ? ಅರಣ್ಯಾಧಿಕಾರಿಗಳಿಂದ ತನ್ನ ಕ್ಷೇತ್ರದ ಬಡ ಕುಟುಂಬಕ್ಕೆ ಆಗುತ್ತಿದ್ದ ದೌರ್ಜನ್ಯವನ್ನು ಪ್ರಶ್ನಿಸುವ ಹಕ್ಕು ಸಂವಿಧಾನಬದ್ಧವಾಗಿ ಕ್ಷೇತ್ರದ ಶಾಸಕರಿಗೆ ಇದೆ. ಕಾಂಗ್ರೆಸ್ ಸರ್ಕಾರದಲ್ಲಿ ಈ ಹಕ್ಕಿಗೆ ಅಡ್ಡಿ ಉಂಟು ಮಾಡುತ್ತಿರುವುದು ಸರ್ವಾಧಿಕಾರಿ ಧೋರಣೆಯ ಪ್ರತೀಕ. ಪ್ರಜಾಪ್ರಭುತ್ವದಲ್ಲಿ ಇದು ಬಹಳ ದಿನ ನಡೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.
ಹಮಾಸ್ ಉಗ್ರರ ಪರ ಕಣ್ಣೀರು ಸುರಿಸುವ ಕಾಂಗ್ರೆಸ್ ನಾಯಕರಿಗೆ ಇಲ್ಲಿನ ಬಡ ಕುಟುಂಬಗಳ ಅಳಲು ಕಾಣುತ್ತಿಲ್ಲ. 75 ವರ್ಷಕ್ಕಿಂತ ಹಿಂದಿನಿಂದಲೂ ಯಾವುದೇ ಸಮಸ್ಯೆ ಇಲ್ಲದೇ ಇಲ್ಲಿಯೇ ಬದುಕು ನಡೆಸಿದ್ದ ಹಿರಿಯ ಬಡ ಜೀವಗಳನ್ನು ಕಾಂಗ್ರೆಸ್ ಸರ್ಕಾರ ಏಕಾಏಕಿ ಒಕ್ಕಲೆಬ್ಬಿಸುವುದು ನ್ಯಾಯಯುತವಾದುದಲ್ಲ. ಬಡ ಜನರ ನ್ಯಾಯಯುತ ಹೋರಾಟಕ್ಕೆ ಬೆಂಬಲ ನೀಡಿದ ಶಾಸಕ ಹರೀಶ್ ಪೂಂಜಾ ಅವರ ಮೇಲೆ ದಾಖಲಾಗಿರುವ ರಾಜಕೀಯ ಪ್ರೇರಿತ ಪ್ರಕರಣವನ್ನು ತಕ್ಷಣ ಕೈಬಿಡಬೇಕೆಂದು ಶಾಸಕ ಕಾಮತ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
.................