ಮಂಗಳೂರು : ಉಳ್ಳಾಲದ ಮೀನು ಕಾರ್ಖಾನೆಯಿಂದ ಹೊರ ಬರುತ್ತಿರುವ ದುರ್ವಾಸನೆಯಿಂದ ನಗರದ ಹಲವು ಪ್ರದೇಶಗಳ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದು ಕೂಡಲೇ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳ ಬೇಕೆಂದು ಶಾಸಕ ವೇದವ್ಯಾಸ ಕಾಮತ್ ಒತ್ತಾಯಿಸಿದ್ದಾರೆ.
ನೇತ್ರಾವತಿ ನದಿಯ ದಡದಲ್ಲಿರುವ ಉಳ್ಳಾಲದ ಮೀನುಗಾರಿಕೆ ಕಾರ್ಖಾನೆಯಲ್ಲಿ ಮೀನುಗಳನ್ನು ಸಂಸ್ಕರಿಸುವಾಗ ಹೊರ ಬರುವ ದುರ್ವಾಸನೆಯಿಂದ ಬೋಳಾರ್, ಮುಳಿಹಿತ್ಲು, ಜೆಪ್ಪು ಮುಂತಾದಪ್ರದೇಶದ ನಿವಾಸಿಗಳು ಉಸಿರಾಡಲೂ ಸಹ ಕಷ್ಟ ಪಡುತ್ತಿದ್ದಾರೆ. ಇಲ್ಲಿನ ಮಕ್ಕಳ, ವೃದ್ದರ, ರೋಗಿಗಳ ಸ್ಥಿತಿಯಂತೂ ಹೇಳತೀರದ್ದಾಗಿದೆ. ಅನೇಕರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ವಿಶೇಷ ಆದ್ಯತೆಯ ಮೇರೆಗೆ ಕ್ರಮಕೈಗೊಳ್ಳಬೇಕು. ನಗರದಲ್ಲಿ ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣ ನಿರ್ಮಿಸಲು ಸಹಕರಿಸಬೇಕು ಎಂದು ಶಾಸಕರು ವಿನಂತಿಸಿದ್ದಾರೆ.