ಜಿಲ್ಲೆ

ಕಾಲೇಜು ವಿದ್ಯಾರ್ಥಿಗಳಿಗೂ ದಸರಾ ರಜೆ ನೀಡಿ : ಶಾಸಕ ವೇದವ್ಯಾಸ ಕಾಮತ್ ಆಗ್ರಹ

Mangaluru - Hariprasad Rai


ಮಂಗಳೂರು : ಹಿಂದುಗಳ ಪ್ರಮುಖ ಹಬ್ಬ ನವರಾತ್ರಿಗೆ ಮಂಗಳೂರು ವಿವಿ ಕಾಲೇಜುಗಳಿಗೆ ರಜೆ ಇಲ್ಲ ಎಂದು ಅನೇಕ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ದೂರುಗಳು ಬರುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಿ ಕಾಲೇಜು ವಿದ್ಯಾರ್ಥಿಗಳಿಗೂ ದಸರಾ ರಜೆ ನೀಡಬೇಕೆಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
ಮಂಗಳೂರು ದಸರಾ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಈ ಸಂದರ್ಭ ಕಟೀಲು, ಪೊಳಲಿ, ಮಂಗಳಾದೇವಿ, ವೆಂಕಟರಮಣ ದೇವಸ್ಥಾನ, ಗೋಕರ್ಣನಾಥ ಸೇರಿದಂತೆ ಹಲವು ಪ್ರಮುಖ ದೇವಿ ಸನ್ನಿಧಿಗಳಿಗೆ ಭಕ್ತಸಾಗರವೇ ಹರಿದು ಬರುತ್ತದೆ. ಕಾಲೇಜುಗಳಿಗೆ ರಜೆ ನೀಡದಿರುವುದು ಹಬ್ಬದ ಸಂಭ್ರಮಕ್ಕೆ ಅಡ್ಡಿಯುಂಟು ಮಾಡಿದಂತಾಗುತ್ತದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಲೇಜುಗಳಿಗೂ ರಜೆ ಕೊಡಿಸಲು ನಾವು ಯಶಸ್ವಿಯಾಗಿದ್ದೆವು. ಈಗ ಕಾಂಗ್ರೆಸ್ ಸರ್ಕಾರವೂ ಅದೇ ಮಾದರಿಯನ್ನು ಅನುಸರಿಸಬೇಕು. ಕಾಲೇಜು ಆಡಳಿತ ಮಂಡಳಿಗಳಿಗೆ ದಸರಾ ರಜೆ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.
ಈ ಮಧ್ಯೆ ಮಳೆಗಾಲದಲ್ಲಿ ಶಾಲೆಗಳಿಗೆ ನೀಡಲಾಗಿದ್ದ ರಜೆಗಳನ್ನು ಸರಿದೂಗಿಸಲು ದಸರಾ ರಜೆ ಸಂದರ್ಭದಲ್ಲಿ ವಿಶೇಷ ತರಗತಿ ನಡೆಸಲು ಕೆಲವು ಶಾಲೆಗಳು ಮುಂದಾಗಿರುವ ಬಗ್ಗೆಯೂ ದೂರುಗಳು ಬಂದಿವೆ. ಕಾಂಗ್ರೆಸ್ ಸರ್ಕಾರದ ಹಿಂದು ವಿರೋಧಿ ನೀತಿಯಿಂದಾಗಿ ಹಿಂದು ಸಮಾಜ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಮತ್ತೆ ಹಿಂದೂ ಧಾರ್ಮಿಕ ಭಾವನೆಗಳನ್ನು ಕಡೆಗಣಿಸದೆ ಕೂಡಲೇ ಸರ್ಕಾರ ಕ್ರಮ ವಹಿಸಬೇಕು ಎಂದು ಶಾಸಕ ಕಾಮತ್ ಆಗ್ರಹಿಸಿದ್ದಾರೆ.