ಮಂಗಳೂರು : ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲೆ ಹಲ್ಲೆ, ದೌರ್ಜನ್ಯದ ಜತೆಗೆ ಸರಣಿ ಕೊಲೆಗಳೇ ನಡೆಯುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಮಾತ್ರ ಈ ಬಗ್ಗೆ ಗಮನ ಹರಿಸದೆ ನಿರ್ಲಕ್ಷೃ ವಹಿಸಿರುವುದು ಖಂಡನೀಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಹಾಡಹಗಲೇ ಕೊಲ್ಲುವ ವಾತಾವರಣ ಸೃಷ್ಟಿಯಾಗಿದೆ. ಅಮಾಯಕ ಹೆಣ್ಣುಮಕ್ಕಳು ರಾಕ್ಷಸೀ ಮನಸ್ಥಿತಿಯವರಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹುಬ್ಬಳ್ಳಿಯ ನೇಹಾ ಪ್ರಕರಣ, ಕೊಡಗಿನ ಅಪ್ರಾಪ್ತ ಬಾಲಕಿಯ ಭೀಕರ ಕೊಲೆ, ಅಂಜಲಿ ಎಂಬ ಯುವತಿಯ ಹತ್ಯೆ, ಹೀಗೆ ಸರಣಿ ಘಟನೆಗಳು ನಡೆಯುತ್ತಿದ್ದರೂ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.
ಕರ್ನಾಟಕ ಹೆಣ್ಣುಮಕ್ಕಳ ಪಾಲಿಗೆ ಅಸುರಕ್ಷಿತ ಎಂಬ ಭಾವನೆ ಮೂಡಿ ರಾಜ್ಯದ ಘನತೆಗೆ ಧಕ್ಕೆಯಾಗಿದೆ. ಹಂತಕರನ್ನು ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ದುಷ್ಟರ ಅಟ್ಟಹಾಸ ಕೊನೆಗೊಂಡು ನೆಮ್ಮದಿಯ ವಾತಾವರಣ ಸೃಷ್ಟಿಯಾಗಬೇಕೆಂದು ಶಾಸಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.