ಮಂಗಳೂರು : ರಾಜ್ಯದ ಕೃಷಿ ಸಚಿವರ ವಿರುದ್ದ ಕೃಷಿ ಅಧಿಕಾರಿಗಳು ಅಧಿಕೃತವಾಗಿ ರಾಜ್ಯಪಾಲರಿಗೆ ಲಿಖಿತ ದೂರು ನೀಡಿದ್ದು, ಕಾಂಗ್ರೆಸ್ ಸರ್ಕಾರದ ಭ್ರಷ್ಟ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಭ್ರಷ್ಟಾಚಾರದ ಆರೋಪವನ್ನು ಅಲ್ಲಗೆಳೆಯುತ್ತಿದ್ದ ಕಾಂಗ್ರೆಸ್ ಸರ್ಕಾರ ಈಗ ಈ ದೂರಿಗೆ ಸಂಬಂಧಿಸಿದಂತೆ ರಾಜ್ಯದ ಜನತೆಗೆ ಉತ್ತರ ಕೊಡಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
ಸಾರಿಗೆ ಇಲಾಖೆಯ ನೌಕರನ ಆತ್ಮಹತ್ಯೆ ಯತ್ನ ಪ್ರಕರಣವೂ ಇದೇ ಮಾದರಿಯ ಕಿರುಕುಳದಿಂದ ಆಗಿರು ಶಂಕೆ ಇದೆ.
ಭ್ರಷ್ಟಾಚಾರ ಸಹಿಸಲ್ಲ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳಿಗೆ ತಮ್ಮ ಕಾಲ ಬುಡದಲ್ಲೇ ಭ್ರಷ್ಟಾಚಾರ ನಡೆಯುತ್ತಿರುವುದು ಕಾಣಿಸುತ್ತಿಲ್ಲವೇ ? ಎಂದು ಅವರು ಪ್ರಶ್ನಿಸಿದ್ದಾರೆ.
ಉಡುಪಿ ವಿಡಿಯೋ ರೆಕಾರ್ಡಿಂಗ್ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರವೇ ಮುಂದೆ ನಿಂತಿದೆ. ಕಾಂಗ್ರೆಸ್ ಸರ್ಕಾರ ಸುಸೂತ್ರವಾಗಿ ಆಡಳಿತ ನಡೆಸುವುದನ್ನು ಬಿಟ್ಟು ವರ್ಗಾವಣೆ ದಂಧೆ ನಡೆಸುತ್ತಿದೆ. ಪ್ರತಿನಿತ್ಯ ಒಂದಲ್ಲ ಒಂದು ಇಲಾಖೆಯ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಬೀಳುತ್ತಿದೆ. ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ನಡೆಸಲ್ಪಡುತ್ತಿರುವ ಕದ್ರಿಯಲ್ಲಿರುವ ರಾಣಿ ಅಬ್ಬಕ್ಕ ಅಗ್ನಿವೀರ ತರಬೇತಿ ಕೇಂದ್ರದ ಹಾಸ್ಟೆಲ್ ಅನುದಾನದ ಕೊರತೆಯ ನೆಪದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಈ ಹಿಂದೆ ಹಾಸ್ಟೆಲಿನಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತಿದ್ದ ನೌಕರರಿಗೆ ಕಳೆದ 3-4 ತಿಂಗಳಿನಿಂದ ವೇತನ ನೀಡಿಲ್ಲ. ಅಗ್ನಿವೀರ್ ಯೋಜನೆಯನ್ನು ವಿಫಲಗೊಳಿಸಲು ರಾಜ್ಯ ಸರ್ಕಾರ ಇಂತಹ ಕೆಲಸ ಮಾಡುತ್ತಿದೆ ಎಂದು ಶಾಸಕ ಕಾಮತ್ ಆರೋಪಿಸಿದ್ದಾರೆ.
...................