ಚಾಮರಾಜ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣ ತೊಟ್ಟಿರುವ ಶಾಸಕ ಕೆ.ಹರೀಶ್‌ಗೌಡ ಬುಧವಾರ ಕ್ಷೇತ್ರದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ರಸ್ತೆಗಳ ಅಭಿವೃದ್ಧಿ ಹಾಗೂ ಯುಜಿಡಿ ನಿರ್ಮಾಣ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ದುಡಿಯುತ್ತಿರುವ ಶಾಸಕರು, ನಗರಪಾಲಿಕೆಯ ವಾರ್ಡ್ ನಂ. 21, 18, 40 ಮತ್ತು 41 ರಲ್ಲಿ ವಿಶೇಷ ಅನುದಾನದಲ್ಲಿ ಒಟ್ಟು ಅಂದಾಜು ಮೂರೂವರೆ ಕೋಟಿ ರೂ. ವೆಚ್ಚದ ಅಭಿವೃಧ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ವಾರ್ಡ್ 21ರ ಗಂಗೋತ್ರಿ ಬಡಾವಣೆಯಲ್ಲಿನ ಗಣಪತಿ ದೇವಸ್ಥಾನದ ಮುಂಭಾಗದ ರಸ್ತೆಗಳು ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಹಾಗೂ ಕುದುರೆಮಾಳದ ಸಾಹುಕಾರ ಚೆನ್ನಯ್ಯ ರಸ್ತೆವರೆಗೂ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ 18ರ ವರುಣ ಕಚೇರಿ ಮುಂಭಾಗದ ವಿವೇಕಾನಂದ ರಸ್ತೆಯಲ್ಲಿರುವ ದೊಡ್ಡ ಚರಂಡಿಯ ಸೇತುವೆ ನಿರ್ಮಾಣ ಕಾಮಗಾರಿ, ವಾರ್ಡ್ ನಂ.40 ಹೈದರಗುಂಟೆ ಪಾರ್ಕ್ ಪಕ್ಕದ ರಸ್ತೆಗಳು, ಮಸೀದಿ 1ನೇ ಅಡ್ಡ ರಸ್ತೆ, ಬಜಾರ್ 5ನೇ ಕ್ರಾಸ್, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪಕ್ಕದ ರಸ್ತೆ ಹಾಗೂ ಬೆಸ್ತಗೇರಿಯಲ್ಲಿ ಒಳಚರಂಡಿ ಅಭಿವೃದ್ಧಿ ಕಾಮಗಾರಿ, ಜಮೀಯಾ ಮಸೀದಿ ಹಿಂಭಾಗದ ರಸ್ತೆ, ಇದ್ದಿಲು ಸೋಮಣ್ಣನ ಮನೆಯಿಂದ ಕೆ.ಟಿ. ರಸ್ತೆಯವರೆಗೆ ಹಾಗೂ ಕುರುಬಗೇರಿ 2ನೇ ಕ್ರಾಸ್‌ನಿಂದ ಗರಡಿಕೇರಿವರೆಗೆ ಒಳಚರಂಡಿ ಅಭಿವೃದ್ಧಿ ಕಾಮಗಾರಿ, ಗೋಪಾಲಯ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಅಶೋಕ ರಸ್ತೆ ಪಶ್ಚಿಮದ 11ನೇ ಕ್ರಾಸ್‌ನಿಂದ ಡೆಯಾಗೋಸೀಸ್ ಸೆಂಟರ್‌ವರೆಗೆ ಹಾಗೂ ಕೊಳಸಂಧಿ ಬೀದಿ 2ನೇ ಕ್ರಾಸ್‌ನಲ್ಲಿ ಒಳಚರಂಡಿ ಅಭಿವೃದ್ಧಿ ಕಾಮಗಾರಿ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಚಾಮರಾಜ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಅಂತೆಯೇ ಕ್ಷೇತ್ರದ ಎಲ್ಲ ಭಾಗಗಳ ರಸ್ತೆ, ಯುಜಿಡಿ ಸೇರಿದಂತೆ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ನಾನಾ ಕಾಮಗಾರಿಗಳು ನಡೆಯುತ್ತಿವೆ ಎಂದರು.
ಇಂದಿರಾ ಗಾಂಧಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ, ಮಾಜಿ ಮೇಯರ್‌ಗಳಾದ ಮೋದಮಣಿ, ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ.ಡಿ.ನಾಗಭೂಷಣ್, ಜೆ.ಗೋಪಿ, ಮುಖಂಡರಾದ ವಿಶ್ವ, ರಾಜಣ್ಣ, ಶ್ರೀನಿವಾಸ್, ನಾಗರಾಜ್, ಸಿ.ಎಸ್.ರಘು, ಕುಮಾರ್, ರಾಮಚಂದ್ರು, ಮಹೇಶ್ ಇತರರಿದ್ದರು.