ಮೈಸೂರು: ನಗರದಲ್ಲಿನ ಒಳ ಚರಂಡಿ ಸಮಸ್ಯೆ ಹಾಗೂ ಮಳೆಗಾಲದಲ್ಲಿ ಮಳೆ ನೀರಿನಿಂದ ಉಂಟಾಗುವ ಸಮಸ್ಯೆಗೆ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ.
ಈ ಸಂಬಂಧ ನಗರದ ವಿವಿಧ ಭಾಗಗಳಲ್ಲಿ ಹರಿಯುತ್ತಿರುವ ಒಳಚರಂಡಿ ತ್ಯಾಜ್ಯ ನೀರು ಹಾಗೂ ತೆರೆದ ಮಳೆ ನೀರಿನ ಹರಿವನ್ನು ತಪ್ಪಿಸಲು 194.50 ಕೋಟಿ ರೂ.ವೆಚ್ಚದಲ್ಲಿ 34 ಕಾಮಗಾರಿ ಕೈಗೊಳ್ಳುವ ಕ್ರಿಯಾ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಕೆ.ಹರೀಶ್‌ಗೌಡ ಅವರು ಮೈಸೂರಿನ ಒಳಚರಂಡಿ ಹಾಗೂ ಮಳೆಗಾಲದಲ್ಲಿ ಮೈಸೂರಿನಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದರು.
‘ಮೈಸೂರು ನಗರದಲ್ಲಿ ಹರಿಯುವ ಒಳಚರಂಡಿ ನೀರು ಯಾವ ಕೆರೆಗೆ ಅಥವಾ ಕಾಲುವೆಗಳಿಗೆ ಸೇರುತ್ತದೆ?, ಒಳ ಚರಂಡಿ ನೀರನ್ನು ಸಂಸ್ಕರಿಸಿ ಪುನರ್ ಬಳಕೆ ಮಾಡಲಾಗುತ್ತಿದೆಯೇ? ಎಂದು ಪ್ರಶ್ನಿಸುವ ಜತೆಗೆ ಒಳ ಚರಂಡಿ ಸಮಸ್ಯೆ ಹಾಗೂ ಮಳೆಗಾಲದಲ್ಲಿ ಮಳೆ ನೀರಿನಿಂದ ಉಂಟಾಗುವ ಸಮಸ್ಯೆಗೆ ಪರಿಹಾರ ನೀಡುವಂತೆ ಮನವಿ ಮಾಡಿದ್ದರು.
ಕಾಮಗಾರಿ ಕೈಗೊಳ್ಳಲು ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಪರಿಶೀಲನೆ ಮಾಡಲಾಗುತ್ತಿದೆ. ಮೈಸೂರು ನಗರದ ವಿವಿಧ ಭಾಗಗಳಲ್ಲಿ ಹರಿಯುವ ಒಳಚರಂಡಿ ನೀರನ್ನು ನಾಲ್ಕು ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸಿ ಸಮೀಪದ ಕೆರೆ ಪುನಶ್ಚೇತನಕ್ಕೆ ಬಿಡಲಾಗುತ್ತಿದೆ. ಮೈಸೂರು ನಗರದ ರಾಯನಕೆರೆ, ವಿದ್ಯಾರಣ್ಯಪುರಂ ಮತ್ತು ಕೆಸರೆಯಲ್ಲಿ ಒಟ್ಟು 157.65 ಎಂಎಲ್ಡಿ ಸಾಮರ್ಥ್ಯ ಹಾಗೂ ಇನ್ಫೋಸಿಸ್ ಫೌಂಡೇಶನ್ ವತಿಯಿಂದ 8 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗಿದೆ. ಇಲ್ಲಿ ಸಂಸ್ಕರಿಸಿ ಬಿಡುವ ನೀರನ್ನು ಪುರ್ನಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಲೀನ ನೀರನ್ನು ದೇವನೂರು ಕೆರೆಗೆ ಮರು ಬಳಕೆ ಮಾಡುವ ಕ್ರಿಯಾ ಯೋಜನೆಗೆ ಕೂಡ ಈಗಾಗಲೇ ಅನುಮೋದನೆ ನೀಡಲಾಗಿದೆ. ಇದರ ಜೊತೆಗೆ ತ್ಯಾಜ್ಯ ನೀರು ಹಾಗೂ ಮಳೆ ನೀರು ಹರಿವಿಕೆ ತಪ್ಪಿಸಲು 34 ಕಾಮಗಾರಿ ಕೈಗೊಳ್ಳಲು 194.50 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಸದನದಲ್ಲಿ ಕೆ.ಹರೀಶ್ ಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.