ತುಮಕೂರು: ಕಳೆದ 3-4 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ನಗರ ಪ್ರದಕ್ಷಿಣೆ ನಡೆಸಿದರು. ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿರುವ ತಗ್ಗುಪ್ರದೇಶಗಳಿಗೆ ಪಾಲಿಕೆ ಅಧಿಕಾರಿಗಳೊಂದಿಗೆ ಮಂಗಳವಾರ ಭೇಟಿ ನೀಡಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿದರು.
ನಗರದ ಉಪ್ಪಾರಹಳ್ಳಿಯ ಮುಖ್ಯರಸ್ತೆ ಹಾಗೂ ಶೆಟ್ಟಿಹಳ್ಳಿ ಗೇಟ್ ಅಂಡರ್‌ಪಾಸ್ ಬಳಿಯ ರಾಜಗಾಲುವೆಯಲ್ಲಿ ಉಕ್ಕಿ ಹರಿಯುವ ಮಳೆ ನೀರು ಸೇಕ್ರೆಡ್ ಹಾರ್ಟ್ ಕಾಲೇಜಿನ ಹಿಂಭಾಗದ ಮನೆಗಳಿಗೆ ನುಗ್ಗಿದ ಪರಿಣಾಮ ಕಳೆದೆರಡು ದಿನಗಳಿಂದ ಜನರು ವನವಾಸ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಕಣ್ಣಾರೆ ಕಂಡ ಜ್ಯೋತಿಗಣೇಶ್ ಪಾಲಿಕೆ ಹಾಗೂ ಪಿಡಬ್ಲೂೃಡಿ ಅಧಿಕಾರಿಗಳಿಗೆ ಮುಂದೆ ಈ ರೀತಿ ಸಮಸ್ಯೆ ಉಂಟಾಗದಂತೆ ರಾಜಗಾಲುವೆ ಒತ್ತುವರಿ ತೆರವುಗೊಳಿಸಬೇಕು. ಮಳೆ ನೀರು ಹರಿಯಲು ಪರ್ಯಾಯ ಚರಂಡಿ ವ್ಯವಸ್ಥೆ ಮಾಡಲು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜ್ಯೋತಿಗಣೇಶ್, ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚುವ ಸಾಧ್ಯತೆಯಿದ್ದು, ಮುಂಜಾಗೃತಕ್ರಮವಾಗಿ ರಾಜಗಾಲುವೆಗಳಲ್ಲಿ, ಚರಂಡಿಗಳಲ್ಲಿ ಹೂಳು ತುಂಬಿರುವುದನ್ನು ಸ್ವಚ್ವಗೊಳಿಸಿ ಮಳೆ ನೀರು ಸರಾಗವಾಗಿ ಹರಿಯಲು ಕ್ರಮ ವಹಿಸಬೇಕು. ಮಳೆಯಿಂದ ತೊಂದರೆ ಉಂಟಾದರೆ ದಿನದ 24 ಗಂಟೆಯು ಸಾರ್ವಜನಿಕರಿಗೆ ಸಹಾಯ ಹಸ್ತ ಚಾಚಲು ಪಾಲಿಕೆ ಸಹಾಯವಾಣಿ ಮೊ: 9449872599, ಹಾಗೂ ಆಯಾ ವಾರ್ಡ್‌ಗಳ ಇಂಜನಿಯರ್‌ಗಳ ಪೋನ್ ನಂಬರ್‌ಗಳನ್ನು ಸಹ ಸಾರ್ವಜನಕರಿಗೆ ಸುಲಭವಾಗಿ ಸಿಗುವಂತೆ ವ್ಯವಸ್ಥೆ ಮಾಡಿ. ಎಂತಹುದೇ ಸಮಸ್ಯೆಗಳಿಗೆ ತಕ್ಷಣವೇ ಬಗೆಹರಿಸಲು ಕಾರ್ಯ ಪ್ರವೃತ್ತರಾಗುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಸಿ.ಎನ್.ರಮೇಶ್, ವಿಷ್ಣುವರ್ಧನ್, ಮುಖಂಡರಾದ ಗೀರಿಶ್, ಮಧು, ದೇವರಾಜು, ಟೈಲರ್ ಕುಮಾರ್, ವಿರುಪಣ್ಣ, ನಟರಾಜು, ಪ್ರಸಾದ್, ಶಂಕರಣ್ಣ, ರಾಮಣ್ಣ, ಮಂಜು, ಅನಿಲ್, ಲಕ್ಷ್ಮಣ್, ಶ್ರೀಕಾಂತ್, ಮಾರ್ಕೆಟ್ ಕುಮಾರ್, ಗುರು, ಮಧು, ಸಿದ್ದರಾಜು ಮತ್ತಿತರರು ಇದ್ದರು.