ತುಮಕೂರು: ನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಸುವ 24x7 ಯೋಜನೆ ಮುಂದಿನ 6-7 ತಿಂಗಳಲ್ಲಿ ಕಾರ್ಯಾರಂಭವಾಗಲಿದೆ ಎಂದು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಭರವಸೆ ನೀಡಿದರು.
ವಿದ್ಯಾನಗರದ 20 ಲಕ್ಷ ಲೀಟರ್ ಸಾಮರ್ಥ್ಯದ ಪಂಪ್‌ಹೌಸ್‌ನಲ್ಲಿ ನಗರದ ವಿವಿಧ ಬಡಾವಣೆಗಳ ಓವರ್‌ಹೆಡ್ ಟ್ಯಾಂಕ್‌ಗಳಿಗೆ ನೀರು ಸರಬರಾಜು ಮಾಡಲು ನೂತನವಾಗಿ ಅಳವಡಿಸಿರುವ 120 ಎಚ್‌ಪಿ ಮೋಟಾರ್ ಹಾಗೂ 180 ಎಚ್‌ಪಿ ಮೋಟಾರ್‌ಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, 24x7 ಕುಡಿಯುವ ನೀರು ಸರಬರಾಜು ಆರಂಭವಾದ ಒಂದು ವರ್ಷದಲ್ಲಿ ನಗರದ ಎಲ್ಲ ಬಡಾವಣೆಗಳಿಗೂ ಏಕಕಾಲದಲ್ಲಿ ಕುಡಿಯುವ ನೀರು ಪೂರೈಸಲಾಗುವುದು ಎಂದರು. 24x7 ನೀರಿನ ಯೋಜನೆಯಲ್ಲಿ ನಗರದ ಎಲ್ಲ ಮನೆಗಳಿಗೂ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜಾಗಲಿದೆ, ಎಲ್ಲ ಮನೆಗಳಿಗೂ ಮೀಟರ್ ಅಳವಡಿಸುತ್ತಿದ್ದು, ಅನಗತ್ಯವಾಗಿ ಪೋಲಾಗುವುದು ತಪ್ಪಲಿದೆ ಎಂದು ತಿಳಿಸಿದರು. ವಿದ್ಯಾನಗರದ ಪಂಪ್‌ಪೌಸ್‌ನಲ್ಲಿ ಬೃಹತ್ ನೀರಿನ ಸಂಪು ನಿರ್ಮಿಸಲಾಗಿದ್ದು 20 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿಂದ ಹಲವು ಬಡಾವಣೆಗಳಿಗೆ ನೀರು ಪೂರೈಕೆಯಾಗಲಿದ್ದು, 2 ಮೋಟಾರ್‌ಗಳಿಗೆ ಹೆಚ್ಚುವರಿ ಮೋಟಾರ್‌ಗಳನ್ನು ಸಹ ಒದಗಿಸಲಾಗಿದೆ ಎಂದರು.
ನೀರು ಮಿತವಾಗಿ ಬಳಸಿ: ನೀರನ್ನು ಅನಗತ್ಯವಾಗಿ ವ್ಯರ್ಥ ಮಾಡದೆ, ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ವಿದ್ಯಾನಗರದ ಪಂಪ್‌ಹೌಸ್‌ನಲ್ಲಿ ಹೊಸ ಮೋಟಾರ್‌ಗಳಿಗೆ ಚಾಲನೆ ನೀಡಿದ್ದು, ಹಲವು ಬಡಾವಣೆಗಳಿಗೆ ಸುಸೂತ್ರವಾಗಿ ನೀರು ಪೂರೈಸಲಾಗುವುದು ಎಂದು ಮೇಯರ್ ಲಲಿತಾ ತಿಳಿಸಿದರು. ಉಪಮೇಯರ್ ಬಿ.ಎಸ್.ರೂಪಶ್ರೀ, ಪಾಲಿಕೆ ಸದಸ್ಯರಾದ ಸಿ.ಎನ್. ರಮೇಶ್, ಮಲ್ಲಿಕಾರ್ಜುನ್, ಕೆ.ಎಸ್.ಮಂಜಳಾ, ದೀಪಶ್ರೀ, ಇಂಜಿನಿಯರ್ ಚಂದ್ರಶೇಖರ್ ಇತರರಿದ್ದರು.
ಪ್ರಾಯೋಗಿಕ ಚಾಲನೆ: 2014ರಲ್ಲಿ 185 ಕೋಟಿ ರೂ., ಅನುದಾನದಲ್ಲಿ ಪ್ರಾರಂಭಗೊಂಡ 24x7 ನೀರು ಪೂರೈಕೆ ಯೋಜನೆ ಹಂತ ಹಂತವಾಗಿ ಅನುಷ್ಠಾನಗೊಳ್ಳುತ್ತಿದ್ದು ನಗರದ 26 ಹಾಗೂ 31ನೇ ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ಯೋಜನೆಗೆ ಚಾಲನೆ ನೀಡಲಾಗಿದೆ. 3 ಹಂತದಲ್ಲಿ ನೀರಿನ ದರ ನಿಗದಿಪಡಿಸಿದ್ದು, ರೆಸಿಡೆನ್ಸಿಯಲ್ ಸಂಪರ್ಕಕ್ಕೆ 1 ಸಾವಿರ ಲೀಟರ್ ಬಳಕೆಗೆ 8ರೂ.,ಗಳನ್ನು ನಿಗದಿಪಡಿಸಲಾಗಿದೆ. ಕಮರ್ಷಿಯಲ್ ಹಾಗೂ ಇತರೆ ಸಂಪರ್ಕಗಳಿಗೆ ಹೆಚ್ಚಿನ ದರ ವಿಧಿಸಲಾಗುವುದು.