ಮಂಡ್ಯ: ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವಂತೆ ಮಾಡುವುದು ಜನತಾ ದರ್ಶನದ ಉದ್ದೇಶ. ಆದ್ದರಿಂದ ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ತಾಲೂಕಿನ ಹಳೇ ಬೂದನೂರು ಗ್ರಾಮದಲ್ಲಿ ‘ನಿಮ್ಮ ಶಾಸಕ ನಿಮ್ಮೂರಿಗೆ, ನಿಮ್ಮ ಮನೆ ಬಾಗಿಲಿಗೆ’ ಘೋಷ ವಾಕ್ಯದೊಂದಿಗೆ ಆಯೋಜಿಸಿದ್ದ ಜನತಾದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಬಸರಾಳು, ಕೆರಗೋಡು ಹೋಬಳಿ ಮಟ್ಟದಲ್ಲಿ ಜನತಾ ದರ್ಶನ ಆಯೋಜಿಸಲಾಗಿತ್ತು. 5000 ಹೆಚ್ಚು ಜನರು ಭಾಗವಹಿಸಿ ತಮ್ಮ ಕುಂದುಕೊರತೆಗಳ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಈ ರೀತಿ ಸ್ವೀಕೃತವಾದ ಅರ್ಜಿಯನ್ನು ಒಂದು ತಿಂಗಳು ಕಾಲಮಿತಿಯೊಳಗೆ ಪರಿಹರಿಸಲಾಗಿದೆ. ಒಟ್ಟಾರೆ ಸ್ವೀಕೃತವಾದ ಅರ್ಜಿ ಪೈಕಿ ಶೇ.90ರಷ್ಟು ವಿಲೇವಾರಿಯಾಗಿ ಪರಿಹಾರ ಒದಗಿಸಲಾಗಿದೆ. ಶೇ.10ರಷ್ಟು ಕಾನೂನು ತೊಡಕುಗಳಿಂದ ಪರಿಹರಿಸಲು ಸಾಧ್ಯವಾಗಿಲ್ಲ ಎಂದರು.
ಹೋಬಳಿ ಮಟ್ಟದಲ್ಲಿದ್ದ ಜನತಾದರ್ಶನ ಕಾರ್ಯಕ್ರಮವನ್ನು ಗ್ರಾಮ ಮಟ್ಟಕ್ಕೆ ಪರಿವರ್ತಿಸಲಾಗಿದೆ. ಅದೇ ರೀತಿ ಹಳೇ ಬೂದನೂರು ಗ್ರಾಮದಲ್ಲಿ ಆಯೋಜಿಸಲಾಗಿದೆ. ನಗರ ಪ್ರದೇಶದಲ್ಲೂ ಮನೆ ಮನೆಗಳಿಗೆ ತೆರಳಿ ವಾರ್ಡ್ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಅರ್ಜಿ ಸ್ವೀಕರಿಸಲಾಗುತ್ತಿದೆ. ಈಗಾಗಲೇ 14 ವಾರ್ಡ್‌ನಲ್ಲಿ ಮನೆ- ಮನೆಗೆ ಭೇಟಿ ಮಾಡಲಾಗಿದೆ. ಬೂದನೂರು ಗ್ರಾಮದಲ್ಲಿ ಈ-ಸ್ವತ್ತು ಆಂದೋಲನ ಹಮ್ಮಿಕೊಂಡು ಕಾಲಮಿತಿಯೊಳಗೆ ವಿತರಣೆಯಾಗಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದೇ ರೀತಿ ಜನತಾ ದರ್ಶನದಲ್ಲಿ ಸ್ವೀಕೃತವಾಗಿರುವ ಅರ್ಜಿಯನ್ನು ಸಾಧ್ಯವಾದಲ್ಲಿ ಸ್ಥಳದಲ್ಲೇ ಪರಿಹರಿಸಲಾಗುವುದು. ಉಳಿದವನ್ನು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ನೀಡಿ ಒಂದು ತಿಂಗಳೊಳಗೆ ಪರಿಹರಿಸುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ಮಾತನಾಡಿ, ಈಗಾಗಲೇ 15,000ಕ್ಕೂ ಹೆಚ್ಚು ಪೌತಿ ಖಾತೆಗಳನ್ನು ಮಾಡಿಕೊಡಲಾಗಿದೆ. ಗ್ರಾಮ ಮಟ್ಟದಲ್ಲಿ ಪೌತಿ ಖಾತೆ, ಈ ಸ್ವತ್ತು ಆಂದೋಲನ, ಜನತಾ ದರ್ಶನ ಕಾರ್ಯಕ್ರಮ ಆಯೋಜನೆಗಳಿಂದ ಜನರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್(ಶಿವಪ್ಪ), ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀಣಾ, ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ಇತರರಿದ್ದರು.