ಜಿಲ್ಲೆ

ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ

Mysuru - Desk - Ravikumar

ಮಂಡ್ಯ: ಮದ್ದೂರು ಆತಗೂರು ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ವೃದ್ಧಿಗೆ ಮತ್ತು ರೈತರು ಬೇಸಾಯ ಮಾಡಲು ಅನುಕೂಲ ಕಲ್ಪಿಸುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.


ತಾಲೂಕಿನ ಆತಗೂರು ಗ್ರಾಮದ ಕೆರೆಯನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.


19 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮುಗಿಯುವ ಹಂತದಲ್ಲಿದ್ದು, ಏತ ನೀರಾವರಿಗಳ ಪುನಶ್ಚೇತನಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ. ಈ ಭಾಗದ ರೈತರ ಬಹುದಿನದ ಕನಸು ಈಡೇರಿಸಲು ಕ್ರಮ ವಹಿಸಲಾಗಿದೆ ಎಂದರು.


ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನದಲ್ಲಿ ತೂಬು ರಿಪೇರಿ, ಕೋಡಿ, ಏರಿ ದುರಸ್ತಿ ಇನ್ನಿತರ ಕಾಮಗಾರಿಗಳನ್ನು ಕೈಗೊಂಡು ಹೂಳು ತೆಗೆಸಿ ಹೆಚ್ಚು ನೀರು ಸಂಗ್ರಹ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರಿಂದ ಜನ ಜಾನುವಾರುಗಳಿಗೆ ಮತ್ತು ಕೊಳವೆ ಬಾವಿಗಳ ಪುನಶ್ಚೇತನಗೊಳಿಸಲು ಸಹಕಾರಿಯಾಗಲಿದೆ ಎಂದರು.


ಮುಂದಿನ ದಿನಗಳಲ್ಲಿ ಸರ್ಕಾರ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಲಿದ್ದು, ನೀರಾವರಿ, ನಾಲೆ ಆಧುನೀಕರಣ, ಕೆರೆ ಕಟ್ಟೆಗಳ ಪುನಶ್ಚೇತನ ಮತ್ತು ಕೆರೆಯಂಗಳವನ್ನು ಅಭಿವೃದ್ಧಿಗೊಳಿಸಲು ಸರ್ಕಾರ ಮುಂದಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಕ್ರಿಯಾ ಯೋಜನೆ ತಯಾರಿಸಿದ್ದು ಒಂದು ವರ್ಷದ ಅವಧಿಯಲ್ಲಿ 700 ಕೋಟಿ ರೂ.ಗೂ ಹೆಚ್ಚಿನ ಅನುದಾನ ವಿವಿಧ ಇಲಾಖೆಯ ಸಚಿವರಿಂದ ಬಿಡುಗಡೆಯಾಗಿರುವುದಾಗಿ ಹೇಳಿದರು.