ಜಿಲ್ಲೆ

ಮೈಸೂರಿನಲ್ಲಿ ಶಾಸಕರಿಂದ ಓವರ್ ಹೆಡ್ ಟ್ಯಾಂಕ್ ಉದ್ಘಾಟನೆ

ಆರ್.ಕೃಷ್ಣ

ಮೈಸೂರು:  ತಿಲಕ್‌ನಗರದಲ್ಲಿ ನಿರ್ಮಿಸಿರುವ 10 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲ ಸಂಗ್ರಹಾಗಾರ (ಓವರ್ ಹೆಡ್ ಟ್ಯಾಂಕ್)ಅನ್ನು ಶಾಸಕ ಕೆ.ಹರೀಶ್‌ಗೌಡ ಉದ್ಘಾಟಿಸಿದರು.

ಅಂಧ ಹಾಗೂ ಮೂಕರ ಶಾಲಾ ಆವರಣದಲ್ಲಿ ಟ್ಯಾಂಕ್ ನಿರ್ಮಾಣಗೊಂಡಿರುವುದರಿಂದ ಬಡಾವಣೆಯ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಶಾಸಕರು ಈ ಸಂದರ್ಭ ಸಾರ್ವಜನಿಕರಿಗೆ ಭರವಸೆ ನೀಡಿದರು.

ಸಮಸ್ಯೆ ವಿವರಿಸಿದ ಮಹಿಳೆಯರು: ಬಡಾವಣೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ, ನೀರು ಸಮಯಕ್ಕೆ ಸರಿಯಾಗಿ ಬಿಡುತ್ತಿಲ್ಲ. ಬೆಳಗ್ಗೆ ಮಕ್ಕಳು ಶಾಲೆಗೆ ರೆಡಿ ಮಾಡಬೇಕು. ಈ ಸಮಯದಲ್ಲಿ ನೀರಿನ ಅವಶ್ಯಕತೆ ಹೆಚ್ಚಿರುತ್ತದೆ. ಆದರೆ ಈ ಸಮಯದಲ್ಲಿಯೇ ನಿತ್ಯ ನೀರಿನ ಸಮಸ್ಯೆ ಹೆಚ್ಚಿರುತ್ತದೆ ಎಂದು ಮಹಿಳೆಯರು ಈ ಸಂದರ್ಭ ಶಾಸಕರಿಗೆ ದೂರದರು.

ಸಮಸ್ಯೆಗಳನ್ನು ಆಲಿಸಿದ ಶಾಸಕ ಹರೀಶ್‌ಗೌಡ ಸ್ಥಳದಲ್ಲಿಯೇ ಇದ್ದ ವಾಣಿವಿಲಾಸ ವಾಟರ್ ವರ್ಕ್ಸ್‌ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೊಹಮ್ಮದ ಮುಸ್ತಫಾ ಅವರಿಗೆ ಮಾಹಿತಿ ಕೇಳಿದರು. ಕಳೆದ ವರ್ಷದಿಂದ ನೀರಿನ ಸಮಸ್ಯೆ ಆಗುತ್ತಿದೆ. ಸದ್ಯದಲ್ಲಿಯೇ ಬೇರೆ ಸಂಪರ್ಕ ನೀಡಿ ನೀರಿನ ಸಮಸ್ಯೆಗೆ ಪರಿಹಾರ ನೀಡುವೆ ಎಂದು ಉತ್ತರಿಸಿದರು.

ವಾಣಿವಿಲಾಸ ವಾಟರ್ ವರ್ಕ್ಸ್ ಅಧಿಕಾರಿಗಳು ಶೀಘ್ರವೇ ನೀರಿನ ವ್ಯವಸ್ಥೆ ಮಾಡಲಿದ್ದಾರೆಂದು ಶಾಸಕರು ಭರವಸೆ ನೀಡಿದರು.