ಅರಸೀಕೆರೆ : ನಗರದ ಎಪಿಎಂಸಿ ಪ್ರಾಂಗಣ ಸೇರಿದಂತೆ ಬಾಣಾವರ, ಜೆ.ಸಿ.ಪುರ, ಜಾವಗಲ್ ಹಾಗೂ ಗಂಡಸಿ ಉಪಪ್ರಾಂಗಣಗಳಲ್ಲಿ ನಡೆದಿದ್ದ ಕೊಬ್ಬರಿ ನೋಂದಣಿ ಪ್ರಕ್ರಿಯೆ ಶುಕ್ರವಾರ ಮಧ್ಯಾಹ್ನ ಮುಕ್ತಾಯಗೊಂಡಿತು. ಮಹಾಶಿವರಾತ್ರಿ ಹಬ್ಬದ ದಿನವೂ ಹೇಗಾದರೂ ಹೆಸರು ನೋಂದಣಿ ಮಾಡಿಸಲೇ ಬೇಕು ಎನ್ನುವವರಂತೆ ಹಠಕ್ಕೆ ಬಿದ್ದಿದ್ದ ಪುರುಷ ಹಾಗೂ ರೈತ ಮಹಿಳೆಯರು ನಾ ಮುಂದು, ತಾ ಮುಂದು ಎಂದು ಮುಗಿಬೀಳುತ್ತಿದ್ದರು.
ಇದರಿಂದ ಪ್ರಾಂಗಣದಲ್ಲಿ ಭಾರಿ ಗೊಂದಲ ಸೃಷ್ಟಿಯಾಗಿತ್ತು. ಸ್ಥಳದಲ್ಲಿಯೇ ಮೊಕ್ಕಾಂ ಹೂಡಿರುವ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂದಿತು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಹಾಗೂ ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಪೊಲೀಸರೊಬ್ಬರ ಲಾಠಿ ಹಿಡಿದು ಪರಿಸ್ಥಿತಿ ನಿಯಂತ್ರಿಸಲು ಮುಂದಾಗಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು.
ಜಿಲ್ಲೆಯಲ್ಲಿ ನಾಲ್ಕೂವರೆ ದಿನದಲ್ಲಿಯೇ ಹೆಸರು ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದು ನೂರಾರು ರೈತರು ನಿರಾಸೆ ಅನುಭವಿಸಿದರು. ಎಪಿಎಂಸಿ ಪ್ರಾಂಗಣಕ್ಕೆ ಆಗಮಿಸಿದ್ದ ರೈತರಿಗೆ ಕಳೆದ ಮೂರು ದಿನಗಳಿಂದ ಕೆ.ಎಂ.ಶಿವಲಿಂಗೇಗೌಡ ಮತ್ತವರ ಬೆಂಬಲಿಗರು ಆಹಾರ, ನೀರು ವಿತರಿಸಿದರು.
ಮಾ.18 ರಿಂದ ಕೊಬ್ಬರಿ ಖರೀದಿ ನಡೆಯಲಿದೆ ಎಂದು ಕರ್ನಾಟಕ ಮಾರ್ಕೆಟಿಂಗ್ ಫೆಡರೇಷನ್ ಮೂಲಗಳು ಖಚಿತಪಡಿಸಿವೆ. ತಾಲೂಕಿನ ಐದು ಕೇಂದ್ರಗಳಿಂದ ಒಟ್ಟಾರೆ 8,445 ರೈತರು ಕೊಬ್ಬರಿ ಮಾರಾಟಕ್ಕೆ ಈವರೆಗೆ ಹೆಸರು ನೋಂದಣಿ ಮಾಡಿಸಿದ್ದಾರೆ.