ಹುಣಸೂರು : ವಾರದ ಹಿಂದೆ ಮನೆಯ ಮುಂಭಾಗದ ರಸ್ತೆಯಲ್ಲಿ ಬಿದ್ದು ಕೈ ಮೂಳೆ ಮುರಿದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಕಲಾವಿದ ಟಿ.ಎ.ಹನುಮಯ್ಯ ಅವರ ಮನೆಗೆ ಶನಿವಾರ ಶಾಸಕ ಜಿ.ಡಿ.ಹರೀಶ್‌ಗೌಡ ಭೇಟಿ ನೀಡಿ ಆರ್ಥಿಕ ಸಹಾಯ ನೀಡಿದರು.
ನರಸಿಂಹಸ್ವಾಮಿ ತಿಟ್ಟು ಬಡಾವಣೆಯಲ್ಲಿರುವ ಹನುಮಯ್ಯರ ಮನೆಗೆ ಭೇಟಿನೀಡಿ ಆರೋಗ್ಯ ವಿಚಾರಿಸಿದ ಶಾಸಕ ಈಗಾಗಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಖಾಸಗಿ ಆಸ್ಪತ್ರೆಯ ವ್ಯವಸ್ಥಾಪಕರಿಗೆ ಕರೆ ಮಾಡಿ ಶಸ್ತ್ರಚಿಕಿತ್ಸೆಯ ವೆಚ್ಚ 28 ಸಾವಿರ ರೂ.ಗಳನ್ನು ಮನ್ನಾ ಮಾಡಲು ಮಾಡಿದ ಮನವಿಗೆ ಒಪ್ಪಿಗೆ ನೀಡಿದರು. ನಂತರ ಶಾಸಕ ಹರೀಶ್‌ಗೌಡ ವೈಯಕ್ತಿಕವಾಗಿ 20 ಸಾವಿರ ರೂ. ಗಳನ್ನು ಹನುಮಯ್ಯ ಅವರಿಗೆ ನೀಡಿದರು.
ಶಾಸಕ ಹರೀಶ್‌ಗೌಡ ಮಾತನಾಡಿ, ಹನುಮಯ್ಯ ಕೈ ಮೂಳೆ ಮುರಿತದಿಂದ ಚಿಕಿತ್ಸೆಗೂ ಹಣವಿಲ್ಲದೆ ಪರದಾಡುತ್ತಿದ್ದಾರೆ ಎಂಬ ವಿಷಯ ನನಗೆ ಅನೇಕ ದಲಿತ ಮುಖಂಡರುಗಳಿಂದ ತಿಳಿಯಿತು. ಈ ಹಿನ್ನೆಲೆಯಲ್ಲಿ ಇವರ ಮನೆಗೆ ಭೇಟಿ ನೀಡಿ ಇವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದೇನೆ. ನನಗೆ ರಾಜಕೀಯದಲ್ಲಿ ಸಹಾಯ ಮಾಡಲಿ, ಮಾಡದಿರಲಿ ಜನರು ಸಂಕಷ್ಟದಲ್ಲಿದ್ದಾಗ ಅಂತವರ ಮನೆಗೆ ಮೊದಲು ಭೇಟಿ ನೀಡಿ ಅವರಿಗೆ ನೆರವಾಗು ಎಂದು ನಮ್ಮ ತಂದೆಯವರಿಂದ ನಾನು ಕಲಿತಿದ್ದೇನೆ. ನಮ್ಮ ತಂದೆ ತಾಯಿಯರ ಆಶೀರ್ವಾದ, ಮಾರ್ಗದರ್ಶನದಿಂದಲೇ ನಾನು ಹುಣಸೂರಿನಲ್ಲಿ ಶಾಸಕನಾಗಿ ಇಂತಹ ನೊಂದ ಜನರ ಕಷ್ಟಗಳಿಗೆ ಸ್ಪಂದಿಸುವಂತಾಗಿದೆ ಎಂದರು.
ಸಮಸ್ಯೆಗಳ ಅನಾವರಣ: ಇದೇ ವೇಳೆ ಸ್ಥಳಕ್ಕಾಗಮಿಸಿದ ಬಡಾವಣೆಯ ಮಹಿಳೆಯರು ತಾವು ಅನುಭವಿಸುತಿರುವ ಸಮಸ್ಯೆಗಳ ಕುರಿತು ಮಾಹಿತಿ ನೀಡಿ ಸರಿಪಡಿಸಿಕೊಡಿ ಎಂದು ಅವಲತ್ತುಕೊಂಡರು. ಕೊಳಚೆ ನಿರ್ಮೂಲನಾ ಮಂಡಳಿಯಿಂದ ಹಕ್ಕುಪತ್ರ ದೊರಕಿ ಅತಿಹೆಚ್ಚು ಮಂದಿ ಮನೆ ನಿರ್ಮಿಸಿಕೊಂಡಿರುವ ಬಡಾವಣೆ ಇದಾಗಿದ್ದರೂ, ರಸ್ತೆ, ಚರಂಡಿ, ಸೇರಿದಂತೆ ಮೂಲಸೌಕರ್ಯಗಳ ಕೊರತೆ ಬಡಾವಣೆಯಲ್ಲಿ ಕಾಡುತ್ತಿದೆ, ಮನೆ ಕಟ್ಟಿರುವವರಿಗೆ ಖಾತೆ ಆಗಿಲ್ಲ ಎಂದು ನಿವಾಸಿ ಲಕ್ಷ್ಮಿ ದೂರಿದರು. ಅತಿ ದೊಡ್ಡ ನೀರಿನ ಟ್ಯಾಂಕ್ ಇದ್ದರೂ, ಶುದ್ಧವಾದ ನೀರು ಸಿಗುತ್ತಿಲ್ಲ ಎಂದು ಇಲ್ಲಿನ ಲಲಿತಾ ದೂರಿದರು.
ನಗರಸಭೆ ಅಧಿಕಾರಿಗಳಿಗೆ ಸ್ಥಳದಲ್ಲೇ ಫೋನಾಯಿಸಿದ ಶಾಸಕ, ಪ್ರಥಮವಾಗಿ ನರಸಿಂಹಸ್ವಾಮಿ ತಿಟ್ಟಿನಲ್ಲಿ ಹೆಚ್ಚು ಕೊಳಚೆ ನಿರ್ಮೂಲನಾ ಮಂಡಳಿಯಿಂದ ಫಲಾನುಭವಿಗಳು ಇರುವುದರಿಂದ ಇಲ್ಲಿಂದಲೇ ಖಾತೆ ಮಾಡಲು ಶುರು ಮಾಡಿ ಎಂದು ಸೂಚಿಸಿದರು. ಶುದ್ಧ ಕುಡಿಯುವ ನೀರು ಒದಗಿಸಬೇಕು ಹಾಗೂ ಸಾರ್ವಜನಿಕರು ಓಡಾಡಲು ಸುರಕ್ಷಿತ ರಸ್ತೆಯನ್ನು ತಕ್ಷಣವೇ ಸರಿಪಡಿಸದಿದ್ದರೆ, ಇಂಜಿನಿಯರ್ ಹಾಗೂ ಗುತ್ತಿಗೆದಾರರ ಮೇಲೆ ಸಾರ್ವಜನಿಕರ ಸುರಕ್ಷತಾ ಕಾಯ್ದೆಯಡಿ ದೂರು ದಾಖಲಿಸಬೇಕಾದೀತೆಂದು ಎಚ್ಚರಿಸಿದರು.
ಈ ವೇಳೆ ದಲಿತ ಮುಖಂಡರಾದ ನಿಂಗರಾಜ ಮಲ್ಲಾಡಿ, ಬಸವಲಿಂಗಯ್ಯ, ದೇವೇಂದ್ರ ಕುಳುವಾಡಿ, ಕಿರಿಜಾಜಿ ಗಜೇಂದ್ರ, ಬಲ್ಲೇನಹಳ್ಳಿ ಕೆಂಪರಾಜು, ಅಭಿ ಮೂಕನಹಳ್ಳಿ, ಸಂತೋಷ್, ನಾಗೇಶ್ ದೊಡ್ಡಹೆಜ್ಜೂರು, ಚಾಮನಾಯಕ, ನರಸಿಂಹ ಸ್ವಾಮಿ ತಿಟ್ಟಿನ ನಂಜಪ್ಪ, ಲಕ್ಷ್ಮಿ ಸ್ವಾಮಿಭೋವಿ, ಕಾಳಮ್ಮ, ಹನುಮಯ್ಯನ ಹೆಂಡತಿ ಪ್ರಭಾವತಿ, ಮಕ್ಕಳು ಹಾಜರಿದ್ದರು.