ಜಿಲ್ಲೆ

ಬನವಾಸಿಯಲ್ಲಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿ

Uttara Kannada - Subash Hegde

ಶಿರಸಿ: ತಾಲೂಕಿನ ಬನವಾಸಿ ಭಾಗದಲ್ಲಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಿಲ್ಲ. ಇದರ ಪರಿಣಾಮವಾಗಿ ಅಲ್ಲಿಯ ವಿದ್ಯಾರ್ಥಿಗಳು ಶಿರಸಿಗೆ ಬಂದು ಶಿಕ್ಷಣ ಪಡೆಯುವಂತಾಗಿದೆ. ಈ ವರ್ಷ ಬನವಾಸಿ ಭಾಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇಂಗ್ಲೀಷ್ ಮಾಧ್ಯಮ ಪ್ರೌಢ ಶಾಲೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಮಿನಿ ವಿಧಾನಸೌಧದಲ್ಲಿ ಶುಕ್ರವಾರ ಆಯೋಜಿಸಲಾದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಗುಡ್ನಾಪುರದಂತಹ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೇ ಕಡಿಮೆ ಆಗುತ್ತಿದೆ. ಶಿಕ್ಷಕರ ಕೊರತೆ, ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಇಲ್ಲದಿರುವುದರಿಂದ ಇಷ್ಟೆಲ್ಲ ಸಮಸ್ಯೆ ಆಗುತ್ತಿದೆ. ಶಿಕ್ಷಣ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು. ಶಿರಸಿ ತಾಲೂಕಿನಲ್ಲಿ ಒಟ್ಟೂ ೧೪ ಇಂಗ್ಲಿಷ್ ಮಾಧ್ಯಮದ ಸರ್ಕಾರಿ ಪ್ರೌಢ ಶಾಲೆಗಳಿವೆ. ಆದರೆ, ಬನವಾಸಿ ಭಾಗದಲ್ಲಿ ಕೇವಲ ಒಂದು ಪ್ರೌಢ ಶಾಲೆಗೆ ಮಾತ್ರ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಅವಕಾಶ ನೀಡಲಾಗಿದೆ.ಈ ರೀತಿ ಅಸಮಾನ ಹಂಚಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಬಡವರ ಮಕ್ಕಳೂ ಇಂಗ್ಲೀಷ್ ಮಾಧ್ಯಮದಲ್ಲಿ ಓದುವಂತಾಗಬೇಕು. ಅವರಲ್ಲಿಯೂ ಇಂಗ್ಲೀಷ್ ಜ್ಞಾನ ಬೆಳೆಯಬೇಕು. ಬನವಾಸಿ ಭಾಗದಲ್ಲಿ ಇರುವ ಪ್ರೌಢ ಶಾಲೆಗಳನ್ನು ಉಳಿಸಿಕೊಳ್ಳಬೇಕಿದ್ದು, ಪಾಲಕರು ವಿಶೇಷ ಕಾಳಜಿ ವಹಿಸಬೇಕು ಎಂದರು.

ಸಭೆಗೆ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಬನವಾಸಿ ಹೋಬಳಿಯಲ್ಲಿ ಬದನಗೋಡ ಶಾಲೆ ಶಿಥಿಲವಾಗಿದ್ದು, ಒಂದು ಕೊಠಡಿ ನಿರ್ಮಾಣಕ್ಕೆ ಹಣ ಮಂಜೂರಾಗಿದೆ. ಇದರ ಹೊರತಾಗಿ ೨೧ ಶಾಲೆಗಳ ರಿಪೇರಿ ಕಾರ್ಯ ಆಗಬೇಕಿದೆ. ೧೧ ಅಡುಗೆ ಕೋಣೆ, ೨೦ ಶಾಲೆಗೆ ಶೌಚ ಗೃಹದ ಅಗತ್ಯತೆ ಇದ್ದು, ಮಂಜೂರಿಗೆ ಪ್ರಸ್ತಾವನೆ ಕಳಿಸಿದ್ದೇವೆ. ಗುಡ್ನಾಪುರ ಪ್ರೌಢ ಶಾಲೆಯಲ್ಲಿ ೩೩ ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಶಿಕ್ಷಕರ ಕೊರತೆ ಇದ್ದ ಕಾರಣ ೭ ಶಿಕ್ಷಕರನ್ನು ಈ ವರ್ಷ ನೀಡಿದ್ದೇವೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಗುಡ್ನಾಪುರ ಗ್ರಾಮ ಪಂಚಾಯಿತಿ ಸದಸ್ಯ ರಾಘು ನಾಯ್ಕ ಮಾತನಾಡಿ, ಪಶು ಸಂಗೋಪನಾ ಇಲಾಖೆಯಲ್ಲಿ ಬನವಾಸಿ ಭಾಗದಲ್ಲಿ ವೈದ್ಯರ ಕೊರತೆ ತೀವ್ರವಾಗಿದೆ. ಇರುವ ವೈದ್ಯರು ಬೇರೆಡೆ ವಗಾವಣೆ ಮಾಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬುದನ್ನು ಸಭೆಯ ಗಮನಕ್ಕೆ ತಂದರು. ಈ ವೇಳೆ ಮಾತನಾಡಿದ ಹೆಬ್ಬಾರ್, ವರ್ಗಾವಣೆಗೊಂಡ ಅಧಿಕಾರಿಯ ಜಾಗಕ್ಕೆ ಬೇರೆಯವರು ಬರುವವರೆಗೂ ಅವರಿಗೆ ಬಿಡುಗಡೆಯ ಆದೇಶ ನೀಡಬಾರದು. ಯಾರಿಂದ ಒತ್ತಡ ಬಂದರೂ ಏನೇ ಒತ್ತಡ ಬಂದ್ರೂ ನನ್ನ ಹೆಸರು ಹೇಳಿ. ಅಧಿಕಾರಿಗಳಲ್ಲಿ ಸೇವೆ ಮಾಡುವ ಉದ್ದೇಶ ಇರಬೇಕು. ಮನೆ ಹತ್ತಿರವೇ ವರ್ಗ ಮಾಡಿಸಿಕೊಳ್ಳಬೇಕು ಎಂಬ ಅಧಿಕಾರಿಗಳ ಧೋರಣೆ ಸರಿ ಅಲ್ಲ. ಪಶು ಸಂಗೋಪನಾ ಇಲಾಖೆಗೆ ಅಂಬುಲೆನ್ಸ್ ನೀಡಲಾಗಿದ್ದರೂ ಸಂಜೆಯ ಮೇಲೆ ವೈದ್ಯರು ಮನೆಗಳಿಗೆ ಬರುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇನ್ನು ಕೆಲ ವೈದ್ಯರು ರೈತರ ಬಳಿ ವಾಹನ ಕಳಿಸಿ ಎಂದು ಕೇಳುತ್ತಿರುವ ಬಗ್ಗೆಯೂ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತಗೊಳ್ಳುತ್ತಿದೆ. ಇಂತಹ ಧೋರಣೆಯನ್ನು ಅಧಿಕಾರಿಗಳು ಬಿಡಬೇಕು ಎಂದರು.

ವರದಾ ನದಿಯಲ್ಲಿ ಪ್ರವಾಹ ಸ್ಥಿತಿ ಇನ್ನು ಮುಂದೆ ಉಂಟಾಗುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಈಗಲೇ ಜಾಗೃತವಾಗಬೇಕು. ಮೆಕ್ಕೆ ಜೋಳ ಬೆಳೆದ ರೈತರು ಮಳೆಯಿಂದ ಹಾನಿ ಅನುಭವಿಸಿದ್ದಾರೆ. ಡಿಐಪಿ ಗೊಬ್ಬರ ಈ ವರ್ಷ ಕೊರತೆ ಇದ್ದು, ಕೃಷಿ ಇಲಾಖೆ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ನೀಡುತ್ತಿರಬೇಕು ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ. ಬಿ. ಪಿ. ಸತೀಶ, ತಾ ಪಂ ಕಾರ್ಯನಿರ್ವಹಣಾಧಿಕಾರಿ ಚೆನ್ನಬಸಪ್ಪ ಹಾವಣಗಿ, ತಹಸೀಲ್ದಾರ್ ರಮೇಶ ಹೆಗಡೆ ಇತರರಿದ್ದರು.