ತುಮಕೂರು: ವೈದ್ಯರು, ದಾದಿಯರು, ಪೊಲೀಸ್ ಸಿಬ್ಬಂದಿ ಮಾತ್ರ ಕರೊನಾ ಸೇನಾನಿಗಳಲ್ಲ. ಗ್ರಾಮೀಣ ಭಾಗದಲ್ಲಿ ಎಲೆಮರೆಕಾಯಿಯಂತೆ ಕೆಲಸ ನಿರ್ವಹಿಸುತ್ತಿರುವ ಪಿಡಿಒಗಳು, ಗ್ರಾಮ ಪಂಚಾಯಿತಿ ನೌಕರರೂ ಕರೊನಾ ಸೇನಾನಿಗಳು ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಬಣ್ಣಿಸಿದರು.
ಹೆಗ್ಗೆರೆಯ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕರೊನಾ ಸೇನಾನಿಗಳಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 600 ಮಂದಿ ಅಧಿಕಾರಿಗಳು ಹಾಗೂ ನೌಕರರನ್ನು ಸನ್ಮಾನಿಸಿ, ಆಹಾರದ ಕಿಟ್ ವಿತರಿಸಿ ಮಾತನಾಡಿದರು. ಇದುವರೆಗೂ ಇವರನ್ನು ಯಾರೂ ಗುರುತಿಸಿರಲಿಲ್ಲ. ಈಗ ಅವರನ್ನು ಗುರುತಿಸಿ ಗೌರವ ಸಲ್ಲಿಸಲಾಗುತ್ತಿದ್ದು ಹೆಮ್ಮೆ ಎನಿಸುತ್ತಿದೆ ಎಂದರು.
ನೌಕರರಿಗೆ ಸಂಬಳ ಕೊಡಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟರ್‌ಮನ್‌ಗಳು, ಕಂಪ್ಯೂಟರ್ ಆಪರೇಟರ್‌ಗಳು, ಸ್ವೀಪರ್ಸ್‌ಗೆ ಮೂರ‌್ನಾಲ್ಕು ತಿಂಗಳಿನಿಂದ ಸಂಬಳವಿಲ್ಲದೆ ಕೆಲಸ ನಿರ್ವಹಿಸುತ್ತಿದ್ದು, ಅವರಿಗೆ ಶೀಘ್ರ ಸಂಬಳ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ಸಿಎಂಗೆ ಪತ್ರ ಬರೆಯಲಾಗಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಮೂಲಕವೂ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಹೇಳಿದರು.
ಪಿಡಿಒಗಳು ಹಾಗೂ ನೌಕರರನ್ನು ಯಾರೂ ಗುರುತಿಸಿರಲಿಲ್ಲ. ಆದರೆ, ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರು, ಪ್ರಥಮಬಾರಿಗೆ ಗುರುತಿಸಿ ಸನ್ಮಾನಿಸಿ, ಆಹಾರದ ಕಿಟ್ ವಿತರಿಸುವ ಮೂಲಕ ನಾನು ನಿಮ್ಮ ಜತೆ ಇದ್ದೇನೆ ಎಂಬ ಆತ್ಮಸ್ಥೈರ್ಯ ತುಂಬಿರುವುದು ಮಾದರಿ ಎಂದು ತಾಪಂ ಇಒ ಜೈಪಾಲ್ ತಿಳಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಹಾಲನೂರು ಅನಂತಕುಮಾರ್, ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಬೆಳಗುಂಬ ವೆಂಕಟೇಶ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಜಂಪಾಷ, ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ, ಮುಖಂಡರಾದ ವೈ.ಟಿ.ನಾಗರಾಜ್, ವೆಂಕಟೇಶ್, ಕೆ.ಬಿ.ರಾಜಣ್ಣ, ಪಾಂಡುರಂಗಪ್ಪ, ರಂಗಸ್ವಾಮಯ್ಯ ಇದ್ದರು.
ಶಾಸಕನಾಗಿ 2 ವರ್ಷ ಪೂರ್ಣ: ಮೇ 15ಕ್ಕೆ ಶಾಸಕನಾಗಿ ಎರಡು ವರ್ಷ ಪೂರೈಸಿದ್ದು, ಗ್ರಾಮಾಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳ ಬಗ್ಗೆ ಕಿರುಪುಸ್ತಕ ಹೊರತರುವ ಪ್ರಯತ್ನದಲ್ಲಿದ್ದೇನೆ. ಮಹಾಮಾರಿ ಕರೊನಾದಿಂದ ಲಾಕ್‌ಡೌನ್ ಇರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಯ ಕಿರು ಹೊತ್ತಗೆ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಗೌರಿಶಂಕರ್ ಹೇಳಿದರು.
ಸನ್ಮಾನಿತರು : ಗ್ರಾಪಂ ಪಿಡಿಒಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್‌ಗಳು, ವಾಟರ್‌ಮನ್‌ಗಳು, ಕಂಪ್ಯೂಟರ್ ಆಪರೇಟರ್‌ಗಳು, ಸ್ವೀಪರ್ಸ್ ಕೂಡಾ ಕರೊನಾ ಸೇನಾನಿಗಳೆ. ಹೀಗಾಗಿ ಮಹಿಳಾ ನೌಕರರಿಗೆ ಅರಿಶಿಣ, ಕುಂಕುಮ, ಸೀರೆ ಕೊಟ್ಟು, ಎಲ್ಲ ನೌಕರರಿಗೂ ಶಾಲು ಹೊದಿಸಿ, ಆಹಾರದ ಕಿಟ್ ವಿತರಿಸಿ ಶಾಸಕ ಗೌರಿಶಂಕರ್ ಸತ್ಕರಿಸಿದರು.