ಜಿಲ್ಲೆ

ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿಕೆ ಖಂಡಿಸಿ ಕಂಪ್ಲಿಯಲ್ಲಿ ಮೌನ ಪ್ರತಿಭಟನೆ

Ballari

ಕಂಪ್ಲಿ: ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ಮಂಗಳವಾರ ಮುಸ್ಲಿಮರು ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರು ಕೈಗೆ ಕಪ್ಪು ಪಟ್ಟಿ, ರಾಷ್ಟ್ರಧ್ವಜ ಹಿಡಿದು ಪಟ್ಟಣದ ಮುದ್ದಾಪುರ ಅಗಸಿಯಿಂದ ಪೊಲೀಸ್ ಠಾಣೆವರೆಗೆ ಮೆರವಣಿಗೆ ನಡೆಸಿ ಪಿಎಸ್‌ಐ ಉಮೇಶ್ ರಾಥೋಡ್‌ಗೆ ಮನವಿ ಸಲ್ಲಿಸಿದರು.

ಭಾರತ ಬಹು ಸಂಸ್ಕೃತಿಯಿಂದ ಕೂಡಿದ್ದು, ಸರ್ವರೂ ಸಹಧರ್ಮ ಸಹಿಷ್ಣುತೆಯಿಂದ ಜೀವನ ನಡೆಸುತ್ತಿದ್ದಾರೆ. ಶಾಸಕ ಸೋಮಶೇಖರ ರೆಡ್ಡಿ ಪ್ರಚೋದನಾಕಾರಿ ಭಾಷಣ ಮಾಡುವ ಮೂಲಕ ದೇಶದ ಏಕತೆ, ಸಹೋದರತೆಗೆ ಪೆಟ್ಟು ನೀಡಿದ್ದಾರೆ. ಮೋದಿ, ಷಾರನ್ನು ಮೆಚ್ಚಿಸಲು ಮುಸ್ಲಿಮರ ವಿರುದ್ಧ ನೀಡಿದ ಹೇಳಿಕೆ ಖಂಡನೀಯ. ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು. ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಸಿಪಿಐಎಂ ಜಿಲ್ಲಾ ಘಟಕ ಪ್ರತಿಭಟನೆಗೆ ಬೆಂಬಲಿಸಿತು. ಕಂಪ್ಲಿ ಸೇರಿ ಸುತ್ತಲಿನ ಗ್ರಾಮಗಳ ಮುಸ್ಲಿಮರು ಹಾಗೂ ಹಿಂದುಗಳು ಪಾಲ್ಗೊಂಡಿದ್ದರು. ಬಳಿಕ ಶಿರಸ್ತೇದಾರ್ ಪಂಪಾಪತಿ ಮೂಲಕ ರಾಜ್ಯಪಾಲರಿಗೆ ಬರೆದ ಮನವಿ ಸಲ್ಲಿಸಲಾಯಿತು.