ಜಿಲ್ಲೆ

ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಶಾಸಕ ಜಿ.ಡಿ. ಹರೀಶ್ ಗೌಡ ಆಯ್ಕೆ

ಮೈಸೂರು: ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾಗಿ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ, ಉಪಾಧ್ಯಕ್ಷರಾಗಿ ಬಿ.ಎನ್. ಸದಾನಂದ ಶನಿವಾರ ಅವಿರೋಧವಾಗಿ ಆಯ್ಕೆಗೊಂಡರು.

ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಒಕ್ಕೂಟದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಿ.ಡಿ.ಹರೀಶ್ ಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಎನ್.ಸದಾನಂದ ನಾಮಪತ್ರ ಸಲ್ಲಿಸಿದರು. ವಿರುದ್ಧವಾಗಿ ಯಾರು ಸಹ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾದ ತಹಸಿಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಅವಿರೋಧ ಆಯ್ಕೆ ಘೋಷಣೆ ಮಾಡಿದರು.

ಜಿಲ್ಲಾ ಸಹಕಾರ ಒಕ್ಕೂಟದ ಆಡಳಿತ ಮಂಡಳಿಯ 15 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 13 ಮಂದಿ ಅವಿರೋಧ, ಇಬ್ಬರು ಮತದಾನದ ಮೂಲಕ ಆಯ್ಕೆಗೊಂಡಿದ್ದರು. ಪ್ರಾಥಮಿಕ ಕೃಷಿಪತ್ತಿನ ಸಂಘಗಳ ಕ್ಷೇತ್ರ ಹಾಗೂ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್‌ಗಳ ಕ್ಷೇತ್ರದಿಂದ ಪಿರಿಯಾಪಟ್ಟಣ ತಾಲೂಕಿನಿಂದ ಕೆ.ಕುಮಾರ, ಮೈಸೂರು ತಾಲೂಕಿನಿಂದ ಶಾಸಕ ಜಿ.ಟಿ.ದೇವೇಗೌಡ, ತಿ.ನರಸೀಪುರ ತಾಲೂಕಿನಿಂದ ಮಲ್ಲಣ್ಣ, ನಂಜನಗೂಡು ತಾಲೂಕಿನಿಂದ ಬಿ.ಎನ್.ಸದಾನಂದ, ಸಾಲಿಗ್ರಾಮ ತಾಲೂಕಿನಿಂದ ಎ.ಟಿ.ಸೋಮಶೇಖರ್, ಹುಣಸೂರು ಪಟ್ಟಣದಿಂದ ಶಾಸಕ ಜಿ.ಡಿ.ಹರೀಶ್ ಗೌಡ, ಹುಣಸೂರು ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ಎಸ್.ಕುಮಾರ, ೆುಸೂರು ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ಉಮಾಶಂಕರ್, ಪಟ್ಟಣ ಸಹಕಾರ ಬ್ಯಾಂಕ್‌ಗಳ ಕ್ಷೇತ್ರದಿಂದ ಕುವೆಂಪುನಗರದ ಆರ್.ಆನಂದ್, ಟಿಎಪಿಸಿಎಂಎಸ್ ಹಾಗೂ ಮಾರಾಟ ಸಹಕಾರ ಸಂಘಗಳು ಹಾಗೂ ಬಳಕೆದಾರರ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ಜಿ.ಮಹೇಶ್, ಗೃಹ ನಿರ್ಮಾಣ ಸಹಕಾರ ಸಂಘಗಳ ಕ್ಷೇತ್ರದಿಂದ ಎಚ್.ವಿ.ರಾಜೀವ್, ಮಹಿಳಾ ಸಹಕಾರ ಸಂಘಗಳ ಕ್ಷೇತ್ರದಿಂದ ಎ.ಶಿವಗಾಮಿ, ಎಸ್‌ಸಿ,ಎಸ್‌ಟಿ ಸಹಕಾರ ಸಂಘಗಳ ಕ್ಷೇತ್ರದಿಂದ ಜಿ.ವಿ.ಗುರುರಾಜು ಅವಿರೋಧವಾಗಿ ಆಯ್ಕೆಯಾಗಿದ್ದರು. ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಎಚ್.ಎಸ್.ಪ್ರಶಾಂತ್ ತಾತಾಚಾತ್, ವಿವಿದೋದ್ದೇಶ ಸಹಕಾರ ಸಂಘಗಳು ಹಾಗೂ ಇತರೆ ಸಹಕಾರ ಸಂಘಗಳ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ತಿ.ನರಸೀಪುರ ತಾಲೂಕಿನ ಸಿದ್ದೇಗೌಡ ಗೆಲುವು ಸಾಧಿಸಿದ್ದರು.

ಅಧ್ಯಕ್ಷರಾಗಿ ಆಯ್ಕೆಗೊಂಡ ನಂತರ ಮಾನಾಡಿದ ಜಿ.ಡಿ. ಹರೀಶ್ ಗೌಡ, ಸಹಕಾರ ಕ್ಷೇತ್ರ ಉಳಿದರೆ ರೈತರು ಉಳಿಯುತ್ತಾರೆ. ನಿರ್ದೇಶಕರ ಅಪೇಕ್ಷೆಯಂತೆ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ರೈತರು, ಸಹಕಾರಿಗಳ ಪರವಾಗಿ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲಾಗುವುದು. ಸಹಕಾರಿಗಳಿಗೆ ಸವಲತ್ತುಗಳನ್ನು ಒದಗಿಸುವುದು ಮುಖ್ಯವಾಗಿದೆ ಎಂದರು.