ಜಿಲ್ಲೆ

ಮೇಕೆದಾಟು ಪಾದಯಾತ್ರೆಯಲ್ಲಿದ್ದ ಶಾಸಕ-ಮಾಜಿ ಸಚಿವರಿಗೂ ಕರೊನಾ!

ಬೆಂಗಳೂರು: ಕೋವಿಡ್ ನಿರ್ಬಂಧದ ನಡುವೆಯೂ ವಿರೋಧ ಪಕ್ಷ ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಹಾಗೂ ಮಾಜಿ ಸಚಿವರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.

ಕಾಂಗ್ರೆಸ್​ನ ಹಿರಿಯ ಮುಖಂಡ, ಮಾಜಿ ಸಚಿವ ಎಚ್.ಎಂ. ರೇವಣ್ಣ ಮತ್ತು ಗೌರಿಬಿದನೂರು ಕ್ಷೇತ್ರದ ಶಾಸಕ ಎನ್​.ಎಚ್. ಶಿವಶಂಕರರೆಡ್ಡಿ ಕೋವಿಡ್​ ಸೋಂಕಿಗೆ ಒಳಗಾಗಿದ್ದಾರೆ. ಮತ್ತೊಂದೆಡೆ ಇನ್ನೊಬ್ಬ ಮುಖಂಡ ಸಿ.ಎಂ. ಇಬ್ರಾಹಿಂ ಅವರಿಗೂ ಕರೊನಾ ಸೋಂಕು ತಗುಲಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಶಾಸಕ ಶಿವಶಂಕರರೆಡ್ಡಿ ನಿನ್ನೆ ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಕ್ಷೇತ್ರಕ್ಕೆ ವಾಪಸಾಗಿದ್ದರು. ಇಂದು ಪರೀಕ್ಷೆಗೆ ಒಳಗಾದ ಅವರು ಸೋಂಕು ದೃಢಪಟ್ಟಿದ್ದನ್ನು ತಿಳಿಸಿದ್ದಲ್ಲದೆ, ಹೋಮ್​ ಐಸೋಲೇಷನ್​ಗೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾರೆ.

ರಾಜ್ಯದಲ್ಲಿ ಕರೊನಾ ನಿಯಂತ್ರಣಕ್ಕೆ ಸಿಗದೆ ದಿನೇದಿನೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಮತ್ತೊಂದೆಡೆ ಸಾವಿರಾರು ಜನರು ಭಾಗಿ ಆಗಿರುವ ಪಾದಯಾತ್ರೆಯಲ್ಲಿ ಪಾಲ್ಗೊಂಡವರಲ್ಲೂ ಕೋವಿಡ್ ಸೋಂಕು ದೃಢಪಟ್ಟಿರುವುದು ಕೋವಿಡ್​ ಭೀತಿ ಮತ್ತಷ್ಟು ಹೆಚ್ಚಾಗುವಂತಾಗಿದೆ.