ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಒಳ ಒಪ್ಪಂದ ಆಗಿದ್ದು, ಇದು ನನ್ನ ಸೋಲಿಗೆ ಕಾರಣವಾಯಿತು ಎಂದು ಬಿಜೆಪಿ ಅಭ್ಯರ್ಥಿ ಆರ್. ರಘು ಕೌಟಿಲ್ಯ ಆರೋಪಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಡಿ. ತಿಮ್ಮಯ್ಯ ಪಡೆದ ಮೊದಲ ಪ್ರಾಶಸ್ತ್ಯ ಮತದ ಮತಪತ್ರದಲ್ಲಿ ದ್ವಿತೀಯ ಪ್ರಾಶಸ್ತ್ಯ ಮತ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎನ್. ಮಂಜೇಗೌಡ ಅವರಿಗೆ ದೊರೆತ್ತಿದೆ. ಇದು ಜೆಡಿಎಸ್-ಕಾಂಗ್ರೆಸ್ ನಡುವೆ ನಡೆದಿರುವ ಒಳ ಒಪ್ಪಂದಕ್ಕೆ ಸಾಕ್ಷಿಯಾಗಿದೆ. ಸಿದ್ಧಾಂತದ ಕುರಿತು ದೊಡ್ಡ ಮಾತುಗಳನ್ನು ಆಡುವ ನಾಯಕರು ಈ ಒಳ ಒಪ್ಪಂದದ ವಿಚಾರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪರೋಕ್ಷವಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದರು.
ಈ ಸೋಲಿನೊಂದಿಗೆ ನನಗೆ ಚುನಾವಣಾ ರಾಜಕಾರಣದ ಕುರಿತು ಭ್ರಮನಿರಸನವಾಗಿದೆ. ಆದರೆ, ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ. ನನ್ನ ಮೇಲೆ ವಿಶ್ವಾಸ ಇಟ್ಟು ಪಕ್ಷದ ವರಿಷ್ಠರು ಎರಡು ಬಾರಿ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರು. ಆದರೆ, ಅವರು ನನ್ನ ಮೇಲೆ ಇಟ್ಟಿದ್ದ ಭರವಸೆ ಉಳಿಸಿಕೊಳ್ಳಲು ಆಗಲಿಲ್ಲವಲ್ಲ ಎಂಬ ಬೇಸರ ಇದೆ. ಸಣ್ಣ ಸಮುದಾಯಕ್ಕೆ ಸೇರಿದ ನನ್ನನ್ನು ಗುರುತಿಸಿ ಪಕ್ಷದ ವರಿಷ್ಠರು ಟಿಕೆಟ್ ನೀಡಿದರು. ಹೀಗಾಗಿ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಿದರೂ ಬಿಜೆಪಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ನನ್ನ ಸೋಲಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಮರ್ಶೆಗಳು ಬರುತ್ತಿದೆ. ಆದರೆ, ನನ್ನ ಸೋಲಿಗೆ ನಿಜವಾದ ಕಾರಣ ಏನು ಎಂಬುದನ್ನು ನಾನು ತಿಳಿದುಕೊಳ್ಳಲು ಬಯಸುವುದಿಲ್ಲ. ಬದಲಿಗೆ ಸೋಲಿನ ವಿಮರ್ಶೆಯನ್ನು ಮತದಾರರೇ ಮಾಡಲಿ. ಈ ಸೋಲಿನಿಂದ ನಾನು ಎದೆಗುಂದುವುದಿಲ್ಲ. ನಾನು ನೈತಿಕವಾಗಿ ಗೆದ್ದಿದ್ದೇನೆ. ಆದರೆ, ತಾಂತ್ರಿಕವಾಗಿ ಸೋತಿದ್ದೇನೆ ಎಂದರು.