ಕೂಡ್ಲಿಗಿಯ ಹಿರೇಮಠ ಕಲ್ಯಾಣ ಮಂಟಪದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಉದ್ಘಾಟಿಸಿದರು. ಕಾನಿಪ ತಾಲೂಕು ಅಧ್ಯಕ್ಷ ಮಯೂರ ಮಂಜುನಾಥ, ಮುಖಂಡರಾದ ಬಂಗಾರು ಹನುಮಂತು, ಕೆ.ಎಂ.ತಿಪ್ಪೇಸ್ವಾಮಿ, ಟಿ.ಜಿ.ಮಲ್ಲಿಕಾರ್ಜುನ ಗೌಡ, ಪಪಂ ಸದಸ್ಯ ಕಾವಲಿ ಶಿವಪ್ಪನಾಯಕ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್, ಮಾಜಿ ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಪಪೂ ಕಾಲೇಜು ಪ್ರಾಚಾರ್ಯೆ ಕೊತ್ಲಮ್ಮ, ಟಿಎಚ್ ಡಾ.ಪ್ರದೀಪ್ ಕುಮಾರ್ ಇನ್ನಿತರರಿದ್ದರು. 
ಜಿಲ್ಲೆ

ಜಲ್ವಂತ ಸಮಸ್ಯೆ ಮಾಧ್ಯಮಗಳಿಂದ ಬಹಿರಂಗ

ಪ್ರವೀಣ ಉದುಸಾ ದಲಬಂಜನ್

ಕೂಡ್ಲಿಗಿ: ರಾಜಕೀಯ ಪ್ರವೇಶ ಮಾಡಲು ಪತ್ರಿಕೆಗಳು ಕಾರಣ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಗುಡೇಕೋಟೆ ರಸ್ತೆಯ ಹಿರೇಮಠ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರು ಸಮಾಜ ತಿದ್ದುವ ಮಾರ್ಗದರ್ಶಕರು. ಪ್ರಸ್ತುತ ದಿನಗಳಲ್ಲಿ ಮಾಧ್ಯಮ ಬಹಳ ಮುಖ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶ ಹಾಗೂ ರಾಜ್ಯದ ಜಲ್ವಂತ ಸಮಸ್ಯೆಗಳನ್ನು ಮಾಧ್ಯಮಗಳಿಂದ ಬಹಿರಂಗಗೊಳ್ಳುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಹಾಗಾಗಿ ಪತ್ರಿಕೆಗಳನ್ನು ಓದಲು ಪ್ರಭಾವಿತನಾದೆ. ಪತ್ರಕರ್ತರ ಭವನಕ್ಕೆ ವ್ಯಯಕ್ತಿಕವಾಗಿ 10 ಲಕ್ಷ ರೂ. ನೀಡಲಾಗುವುದು. ಅಲ್ಲದೆ ಪತ್ರಕರ್ತರಿಗೆ ಭವನ ಹಾಗೂ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪತ್ರಕರ್ತರ ಕೆಲಸ ಸವಾಲಿನದ್ದು

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ ಮಾತನಾಡಿ, ಪತ್ರಕರ್ತರ ಕೆಲಸ ಸವಾಲಿನ ಕೆಲಸವಾಗಿದೆ. ಸಮಾಜದಲ್ಲಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ, ಅದನ್ನ ಸರಿಪಡಿಸುವಲ್ಲಿ ಪತ್ರಕರ್ತರ ಪಾತ್ರ ಮುಖ್ಯವಾಗಿರುತ್ತದೆ ಎಂದು ಹೇಳಿದರು. ನಿಧನರಾದ ಹಿರಿಯರಾದ ಪತ್ರಕರ್ತ ಹಿ.ಮ.ಬಸವರಾಜಗೆ ಮೌನಾಚರಣೆ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 10 ಸಾಧಕರಿಗೆ ಸನ್ಮಾನ ಮಾಡಲಾಯಿತು.

ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ಕಾನಮಡಗು ದಾಸೋಹ ಮಠದ ಶರಣಾರ್ಯರು ಸಾನಿಧ್ಯವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಕೆ.ಲಕ್ಷ್ಮಣ, ರಾಜ್ಯ ಸದಸ್ಯ ವೆಂಕೋಬ ನಾಯಕ, ಟಿ.ಜಿ.ಮಲ್ಲಿಕಾರ್ಜುನ ಗೌಡ, ಪ್ರಮುಖರಾದ ಢಾಣಿ ರಾಘವೇಂದ್ರ, ಸಿದ್ದೇಶ, ಬಣವಿಕಲ್ಲು ಎರಿಸ್ವಾಮಿ,ಪಾಪನಾಯಕ, ವಿಶಾಲಾಕ್ಷಿ ರಾಜಣ್ಣ ಇನ್ನಿತರರಿದ್ದರು.