ಗುರುಪುರ: ರಾಜ್ಯದಲ್ಲಿ ಕಳೆದ ಐದಾರು ತಿಂಗಳಿನಿಂದ ಪರಿಸರ ಸಹ್ಯ ಸಿಎನ್ಜಿ ದರ ಬರೋಬ್ಬರಿ ಕೆ.ಜಿ.ಗೆ 4.50 ದರ ಏರಿಸಿದರೆ, ಇದೀಗ ಜನಸಾಮಾನ್ಯರು ಬಳಸುವ ವಿದ್ಯುತ್ ಬೆಲೆ ಏರಿಕೆ ಮಾಡುವ ಮೂಲಕ ಜನರಿಗೆ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯ ಶಾಕ್ ನೀಡುತ್ತಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸುರತ್ಕಲ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಆರ್ಥಿಕ ಇಕ್ಕಟ್ಟಿನಲ್ಲಿ ಸಿಲುಕಿ ಚಡಪಡಿಸುತ್ತಿದೆ. ಆರ್ಥಿಕ ಕ್ರೋಢಿಕರಣಕ್ಕೆ ಜನರಿಗೆ ತಿಳಿಯದಂತೆ ದಿನಸಿ ವಸ್ತುಗಳ ಮೇಲೆ ತೆರಿಗೆ ಹೇರಿದರೆ, ಇದೀಗ ವಿದ್ಯುತ್ ದರವನ್ನು ಏರಿಕೆ ಮಾಡಲಾಗಿದೆ. ವಿದ್ಯುತ್ ದರ ಏರಿಕೆಯಾದಲ್ಲಿ ಪ್ರತಿಯೊಂದು ವಸ್ತುವಿಗೂ ಮತ್ತೆ ಬೆಲೆ ಏರಿಕೆ ಆಗುವುದರಲ್ಲಿ ಸಂಶಯವಿಲ್ಲ.
ಜನರ ಮೇಲೆ ತೆರಿಗೆ, ಬೆಲೆ ಏರಿಕೆ ಮಾಡಿದರೂ ಯಾವುದೇ ಶಾಸಕನಿಗೂ ತನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಮಾತ್ರ ನೀಡುತ್ತಿಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.