ಜಿಲ್ಲೆ

ನನಗೆ ವಯಸ್ಸಾಗಿದೆ ರಾಜಕೀಯ ನಿವೃತ್ತಿ ಪಡೆಯಬೇಕು ಎಂಬುದು ಕುಮಾರಸ್ವಾಮಿ ಬಯಕೆ : ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಆಕ್ರೋಶ

ಸದೇಶ್ ಕಾರ್ಮಾಡ್

ಮೈಸೂರು: ‘ಕಾಂಗ್ರೆಸ್ ಭರ್ತಿಯಾಗಿದ್ದು, ಅಲ್ಲಿ ಜಾಗವಿಲ್ಲ. ಬಿಜೆಪಿ-ಜೆಡಿಎಸ್ ಒಂದಾಗಿದ್ದು, ಅಲ್ಲೂ ಸಹ ಜಾಗವಿಲ್ಲ. ಹಾಗಾಗಿ ನಾನು ರಾಜಕೀಯ ನಿವೃತ್ತಿ ಪಡೆಯಬೇಕು ಎಂಬುದು ಅವರ ಆದೇಶ’ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜಿ.ಟಿ.ದೇವೇಗೌಡರಿಗೆ ವಯಸ್ಸಾಗಿದೆ, ಅವರ ಮಗ ರಾಜಕೀಯಕ್ಕೆ ಬಂದಿದ್ದಾರೆ, ನಮಗೆ ಅವರ ಮಗ ಸಾಕು’ ಎಂಬ ತೀರ್ಮಾನಕ್ಕೆ ಅವರು ಬಂದ ಹಾಗೆ ಇದೆ. ಈ ಕಾರಣಕ್ಕೆ ನನಗೆ ಉಪ ಚುನಾವಣೆಯ ಪ್ರಚಾರಕ್ಕೆ ಆಹ್ವಾನ ನೀಡಿಲ್ಲ. ಕುಮಾರಸ್ವಾಮಿ ಅವರೊಂದಿಗೆ ನಾನು ಮುನಿಸಿಕೊಂಡಿಲ್ಲ. ನಾನು ಅವರ ಜತೆಗೆ ಇದ್ದೇನೆ. ಆದರೆ, ಅವರು ನನ್ನ ಬಗ್ಗೆ ಮಾಡುವುದೇ ಹೀಗೆ, ಅದಕ್ಕೆ ನಾನು ಏನು ಮಾಡಲು ಆಗುವುದಿಲ್ಲ. ಉಪ ಚುನಾವಣೆ ಪ್ರಚಾರಕ್ಕೆ ಆಗಮಿಸುವಂತೆ ನನಗೆ ಅಧಿಕೃತ ಆಹ್ವಾನವನ್ನು ಯಾರು ನೀಡಿಲ್ಲ. ಅಭ್ಯರ್ಥಿ ಸಹ ನನಗೆ ಆಹ್ವಾನ ನೀಡಲಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಚನ್ನಪಟ್ಟಣ ಉಪ ಚುನಾವಣೆ ಪ್ರಚಾರಕ್ಕೆ ನಾನು ಹೋಗಿಲ್ಲ. ಆದರೆ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆದ್ದೇ ಗೆಲ್ಲುತ್ತಾರೆ ಎಂದು ಜೆಡಿಎಸ್ ಕಾರ್ಯಕರ್ತರು ಹೇಳುತ್ತಿದ್ದರು. ಆದರೂ ಅವರಿಗೆ ಸೋಲುಂಟಾಗಿದೆ. ಸೋಲು, ಗೆಲುವು ಪ್ರಜಾಪ್ರಭುತ್ವದಲ್ಲಿ ಸಹಜ. ಆದರೆ, ಮೂರನೇ ಬಾರಿ ಅವರಿಗೆ ಸೋಲಾಗಿದೆ. ಮೂರು ಬಾರಿ ಸೋತು ನಂತರ ಗೆದ್ದು ಮಂತ್ರಿಗಳಾಗಿರುವವರ ಉದಾಹರಣೆ ರಾಜ್ಯದಲ್ಲಿ ಇದೆ. ಹಾಗಾಗಿ ಧೈರ್ಯವಾಗಿ ಸೋಲನ್ನು ಎದುರಿಸಬೇಕು ಹಾಗೂ ಪಕ್ಷವನ್ನು ಸಂಘಟಿಸುವ ಕಡೆಗೆ ಗಮನ ಹರಿಸಬೇಕು ನಿಖಿಲ್ ಕುಮಾರಸ್ವಾಮಿಗೆ ಕಿವಿಮಾತು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ನನಗೆ ಆಹ್ವಾನ ನೀಡಿಲ್ಲ. ವಿಧಾನಸಭಾ ಚುನಾವಣೆಗೂ ಮುನ್ನ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ನನಗೆ ಆಹ್ವಾನ ನೀಡಿದ್ದು ನಿಜ. ಆದರೆ, ಇದೀಗ ಸಿದ್ದರಾಮಯ್ಯ ಅವರಿಂದ ನನಗೆ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ಬಂದಿಲ್ಲ. ಈ ವಿಚಾರದಲ್ಲಿ ಏಕೆ ನಾನು ಸುಳ್ಳು ಹೇಳಬೇಕು ಎಂದು ಪ್ರಶ್ನಿಸಿದರು.

ಚಾಮುಂಡಿಬೆಟ್ಟದಲ್ಲಿ ದಸರಾ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದೆ. ಆ ನಂತರ ಅವರೊಂ ದಿಗೆ ನಾನು ಮಾತುಕತೆ ನಡೆಸಿಲ್ಲ. ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಸಿದ್ದರಾಮಯ್ಯ ನನಗೆ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದ್ದರು. ಆದರೆ, ನನ್ನೊಂದಿಗೆ ಅವರು ಮಾತುಕತೆ ನಡೆಸಿಲ್ಲ ಎಂದು ಹೇಳಿದರು.