ಜಿಲ್ಲೆ

ಅಧಿವೇಶನದಲ್ಲಿ ವಕ್ಪ್ ವಿಷಯ ಪ್ರಸ್ತಾಪ: ಶಾಸಕ ದರ್ಶನ ಪುಟ್ಟಣ್ಣಯ್ಯ

ಬ್ಯಾಡಗಿ: ವಕ್ಪ್ ಹೆಸರಲ್ಲಿ ರೈತರ ಒಂದಿಂಚೂ ಭೂಮಿ ಮೋಸವಾಗಲು ಬಿಡುವುದಿಲ್ಲ. ಈ ಕುರಿತು ರೈತ ಸಂಘ ಗಟ್ಟಿಯಾಗಿ ಧ್ವನಿ ಎತ್ತಿದೆ. ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ರೈತರಿಗೆ ನ್ಯಾಯ ಕೊಡಿಸಲು ಬದ್ಧ ಎಂದು ಮೇಲುಕೋಟೆ ಶಾಸಕ ದರ್ಶನ ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳ ರೈತರ ಜಮೀನುಗಳ ಪಹಣಿಯಲ್ಲಿ ವಕ್ಪ್ ಹೆಸರು ದಾಖಲಾಗಿದೆ. ಎಲ್ಲ ಜಿಲ್ಲೆಯಲ್ಲೂ ರೈತರು ಗಟ್ಟಿಯಾಗಿ ಧ್ವನಿ ಎತ್ತಿದ ಪರಿಣಾಮ ಮುಖ್ಯಮಂತ್ರಿಗಳು ಆದೇಶ ಹಿಂಪಡೆದ ಪ್ರಸಂಗವೂ ನಡೆದಿದೆ. ರೈತರಿಗೆ ಹೋರಾಟದಿಂದ ಎಲ್ಲವನ್ನು ಗೆಲ್ಲುವ ಶಕ್ತಿಯಿದೆ. ರೈತರಿಗೆ ಎಲ್ಲಿಯಾದರೂ ಅನ್ಯಾಯವಾದರೆ ಹೋರಾಟಕ್ಕಿಳಿಯುವ ಸಂಕಲ್ಪ ಮಾಡಿದ್ದೇನೆ ಎಂದರು.

ರೈತಪರ ಶಾಸಕನಾಗಿ ಕ್ಷೇತ್ರದ ಜನ ಆಯ್ಕೆ ಮಾಡುವ ಮೂಲಕ ವಿಶ್ವಾಸದಿಂದ ವಿಧಾನಸಭೆಗೆ ಕಳುಹಿಸಿದ್ದಾರೆ. ನನ್ನ ಚುನಾವಣೆ ವೇಳೆ ರಾಜ್ಯದ ಮೂಲೆಮೂಲೆಗಳಿಂದ ರೈತರು ಆಗಮಿಸಿ ದೇಣಿಗೆ ನೀಡಿದ್ದಲ್ಲದೆ, ಗೆಲುವಿಗೆ ಹಗಲಿರುಳು ಶ್ರಮಿಸಿದ್ದಾರೆ. ರೈತಪರ ನಿಲುವು ಹಾಗೂ ನನ್ನ ತಂದೆಯವರು ರೈತ ಸಂಘಕ್ಕೆ ನೀಡಿದ ಕೊಡುಗೆ ರಾಜ್ಯದ ಜನತೆಗೆ ತಿಳಿದಿದೆ ಎಂದರು.

ಬೆಳೆ ವಿಮೆ ಕಂಪನಿಗಳು ಕಂತು ತುಂಬಿಸಿಕೊಳ್ಳುವಾಗ ಕೊನೆಯ ದಿನಾಂಕ ನಿಗದಿಪಡಿಸಿದಂತೆ, ವಿಮೆ ಮೊತ್ತ ನೀಡುವ ದಿನ ಪ್ರಕಟಿಸಬೇಕು ಎಂದು ಒತ್ತಾಯಿಸಿ ಡಿ. 9ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಹೋರಾಟಕ್ಕಿಳಿಯುತ್ತೇನೆ. ರೈತ ಸಂಘ ಎಲ್ಲ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸಲು ನಿರ್ಧರಿಸಿದೆ ಎಂದರು.

1980ರ ದಶಕದಲ್ಲಿ ನಡೆಸಿದ ಹೋರಾಟದ ಫಲದಿಂದ ರೈತ ಸಂಘ ತೀವ್ರ ಪ್ರಭಾವಿಯಾಗಿ ಬೆಳೆದು ನಿಂತಿದೆ. ಈಗಲೂ ರೈತ ಸಂಘ ಬಲಿಷ್ಠವಾಗಿದ್ದು, ಭಿನ್ನಾಭಿಪ್ರಾಯ ಇತ್ಯಾದಿಗಳಿಂದ ಕೆಲ ಮುಖಂಡರು ದೂರವಾಗಿದ್ದಾರೆ. ಎಲ್ಲರನ್ನು ಒಂದಾಗಿಸಿ, ಒಂದೇ ವೇದಿಕೆಯಲ್ಲಿ ಕರೆತಂದು ರೈತ ಶಕ್ತಿ ಸಂಘಟಿಸಲಾಗುತ್ತಿದೆ. ಹಾವೇರಿ ಜಿಲ್ಲೆಯ ರೈತ ಸಂಘ ರಾಜ್ಯಕ್ಕೆ ಮಾದರಿಯಾಗಿದ್ದು, ಶೀಘ್ರದಲ್ಲೇ ರಾಜ್ಯಮಟ್ಟದ ರೈತ ಸಭೆ ಏರ್ಪಡಿಸಲಾಗುವುದು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ತಾಲೂಕಾಧ್ಯಕ್ಷ ರುದ್ರನಗೌಡ್ರ ಕಾಡನಗೌಡ್ರ, ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ, ಮುಖಂಡರಾದ ಮರಿಗೌಡ್ರ ಪಾಟೀಲ, ಶಂಕರ ಮರಗಾಲ, ಮಲ್ಲೇಶ ಡಂಬಳ, ನಿಂಗಪ್ಪ ಮಾಸಣಗಿ ಇತರರಿದ್ದರು.