ಜಿಲ್ಲೆ

ಭೋಗದಿಂದ ಅನಾರೋಗ್ಯ, ಯೋಗದಿಂದ ಆರೋಗ್ಯ

ಹೊನ್ನಾಳಿ: ಭೋಗದಿಂದ ಅನಾರೋಗ್ಯ, ಯೋಗದಿಂದ ಆರೋಗ್ಯವಂತ ಬದುಕು ಸಾಗಿಸಬಹುದು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಹಿರೇಕಲ್ಮಠದಲ್ಲಿ ಶನಿವಾರ ಪತಂಜಲಿ ಯೋಗ ಸಮಿತಿ, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ತಾಲೂಕು ಘಟಕ, ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಯುಗದ ಒತ್ತಡ ಜೀವನ ಶೈಲಿಗೆ ಯೋಗಾಭ್ಯಾಸ ಸಹಕಾರಿಯಾಗಿದೆ. ಭಾರತದ ಋಷಿಮುನಿಗಳಿಂದ ವರದಾನವಾಗಿ ಬಂದ ಯೋಗವು ಪ್ರಸ್ತುತ ವಿಶ್ವವ್ಯಾಪಿಯಾಗಿ ಎಲ್ಲರ ಆರೋಗ್ಯವನ್ನು ಕಾಪಾಡುತ್ತಿದೆ ಎಂದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಯೋಗ ಭಾರತ ಸಂಸ್ಕೃತಿಯ ಪ್ರತೀಕವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಇದರ ಮಹತ್ವವನ್ನು ವಿವಿಧ ರಾಷ್ಟ್ರಕ್ಕೆ ತಿಳಿಸಿ ವಿಶ್ವಮನ್ನಣೆ ಪಡೆಯುವಂತೆ ಮಾಡಿದ್ದಾರೆ ಎಂದು ಹೇಳಿದರು.

ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಯೋಗದ ಉದ್ದೇಶವು ಹೇಯಂ ದುಃಖ ಮನಾಗತಂ, ಅಂದರೆ ದುಃಖವನ್ನು ಅದು ಬರುವ ಮುಂಚೆಯೇ ತಡೆಯುವುದು ಎಂದರ್ಥ. ಯೋಗ ರೋಗ ನಿವಾರಕವಾಗಿದ್ದು, ಜೀವನ ನಡೆಸುವ ಮನಸ್ಸನ್ನು ನಿರ್ವಹಿಸುವ ಕೌಶಲವನ್ನು ಮನುಷ್ಯನಿಗೆ ನೀಡುತ್ತದೆ ಎಂದರು.

ಸಿಡಿಪಿಒ ಜ್ಯೋತಿ, ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಬ್ಬಾರ್ ಮಾತನಾಡಿದರು. ಉಪನ್ಯಾಸಕ ಮಂಜುನಾಥ್ ಗೊಲ್ಲರಹಳ್ಳಿ ಉಪನ್ಯಾಸ ನೀಡಿದರು. ಹಿರೇಕಲ್ಮಠ ಆವರಣದಲ್ಲಿ ನೂರಾರು ಜನ ಯೋಗ ಪ್ರದರ್ಶನ ಮಾಡಿದರು.

ಬ್ರಹ್ಮಕುಮಾರಿ ಸಂಸ್ಥೆಯ ಜ್ಯೋತಿ ಅಕ್ಕ, ಯೋಗ ಶಿಕ್ಷಕ ಶ್ರೀಕಾಂತ ಕುರ್ಡೆಕರ್, ಪತಂಜಲಿ ಸಮಿತಿ ರುದ್ರೇಶ್, ರಾಘವೇಂದ್ರ ವೈಶ್ಯರ್, ಜಗದೀಶ್ ಆಚಾರ್, ಸುರೇಶ್ ಕುಂಬಾರ, ಚನ್ನೇಶ ಜಕ್ಕಾಳಿ, ದಿಲೀಪ್​ಕುಮಾರ್, ನರಸಿಂಹಪ್ಪ, ಕೆ. ಚಂದ್ರಪ್ಪ, ಅಂಬಿಕಾ ಪ್ರಕಾಶ್ ಹೆಬ್ಬಾರ, ಮೀನಾ ಗಣೇಶ್, ದಾಕ್ಷಾಯಿಣಿ, ಪ್ರಕಾಶ್ ಕುಂಬಾರ್, ಶೀಲಾ ಯಶೋದಾ, ರವಿಕುಮಾರ್, ಸಚ್ಚಿನ್, ಅನುಷಾ ಗಿರೀಶ್ ಮತ್ತಿತರರಿದ್ದರು.