ಮುದ್ದೇಬಿಹಾಳದ ಕೋಳೂರು ತಾಂಡಾದಲ್ಲಿ ರೀತಿಬಾಯಿ ನಾಯಕ ಸ್ಮರಣಾರ್ಥ ನಿರ್ಮಿಸಲಾಗಿರುವ ದುರ್ಗಾದೇವಿ ಮಹಾದ್ವಾರವನ್ನು ಶಾಸಕ, ಕೆಎಸ್‌ಡಿ ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ ಲೋಕಾರ್ಪಣೆಗೊಳಿಸಿದರು. ಎಂಎಲ್‌ಸಿ ಪ್ರಕಾಶ ರಾಠೋಡ, ಚಿದಾನಂದ ಸೀತಿಮನಿ, ರವಿ ನಾಯಕ, ಗಣ್ಯರು ಇದ್ದಾರೆ. 
ಜಿಲ್ಲೆ

ಕೋಳೂರು ತಾಂಡಾದಲ್ಲಿ ದುರ್ಗಾದೇವಿ ಮಹಾದ್ವಾರ ಲೋಕಾರ್ಪಣೆ

ಮುದ್ದೇಬಿಹಾಳ: ನಮ್ಮೊಳಗಿರುವ ರಾಕ್ಷಸನನ್ನು ಕೊಲ್ಲುವ ಶಕ್ತಿ ತಾಯಂದಿರಿಗೆ ಇದೆ. ಹೆಣ್ಣಿನ ಅವತಾರವೇ ನವದುರ್ಗಿಯರು. ನಮ್ಮಲ್ಲಿರುವ ಕಾಮ, ಕ್ರೋಧ, ಲೋಭ ಮುಂತಾದ ಮತ್ಸರಗಳನ್ನು ಬದಿಗಿಟ್ಟು ನಡೆದುಕೊಂಡರೆ ಉತ್ತಮ ಜೀವನ ನಮ್ಮದಾಗುತ್ತದೆ. ಹಬ್ಬಗಳ ಆಚರಣೆಯ ಹಿಂದಿನ ಪಾವಿತ್ರತೆಯನ್ನು ನಾವೆಲ್ಲರೂ ಅರಿತುಕೊಳ್ಳಬೇಕು ಎಂದು ಶಾಸಕ, ಕೆಎಸ್‌ಡಿ ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ ಹೇಳಿದರು.

ಕೋಳೂರು ತಾಂಡಾ (ವಿಜಯನಗರ)ದಲ್ಲಿ ದಿ. ರೀತಿಬಾಯಿ ನಾನಪ್ಪ ನಾಯಕ ಸ್ಮರಣಾರ್ಥ ಅವರ ಮಗ ರವಿ ನಾಯಕ ಪರಿವಾರದವರು ನಿರ್ಮಿಸಿರುವ ಶ್ರೀ ದುರ್ಗಾದೇವಿ ಮಹಾದ್ವಾರ, ಮೂರ್ತಿಯನ್ನು ಗುರುವಾರ ಲೋಕಾರ್ಪಣೆಗೊಳಿಸಿ ನಂತರ ನಡೆದ ಬಹಿರಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಂಜಾರಾ ಸಮಾಜದವರು ತಮ್ಮ ಸಂಪ್ರದಾಯವನ್ನು ಎಂದಿಗೂ ಕೈಬಿಡಬಾರದು. ಕುಟುಂಬದಲ್ಲಿ ಶಾಂತಿ ನೆಲೆಸಿದರೆ ಸಂಸಾರ, ಬದುಕು ಉತ್ತಮವಾಗುತ್ತದೆ ಅನ್ನೋದನ್ನು ಅರಿತುಕೊಳ್ಳಬೇಕು. ತಾಯಂದಿರಿಗೆ, ಮಹಿಳೆಯರಿಗೆ ಇರುವ ಧೈರ್ಯ ಬೇರೆ ಯಾರಿಗೂ ಇರುವುದಿಲ್ಲ. ಯುವಕರು ಬದುಕನ್ನು ಅರ್ಥ ಮಾಡಿಕೊಂಡಾಗ ಮಾತ್ರ ಅವರ ವಿಚಾರಧಾರೆಗಳು ಬದಲಾಗುತ್ತವೆ. ಭಾರತೀಯ ಸಂಸ್ಕೃತಿ ಅತ್ಯುತ್ತಮವಾದದ್ದಾಗಿದೆ. ದೇವರ ಹೆಸರಿನಲ್ಲಿ ಕುರಿ, ಕೋಣ ಬಲಿ ಕೊಡುವುದನ್ನು ನಿಲ್ಲಿಸಬೇಕು ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಮಾತನಾಡಿ, ಸಮಾಜದ ಋಣ ತೀರಿಸುವ ಕೆಲಸವನ್ನು ರವಿ ನಾಯಕ ಮಾಡಿದ್ದಾರೆ. ಚಿದಾನಂದ ಸೀತಿಮನಿ ಮತ್ತು ಸಹೋದರರದ್ದು ಮಾತು ಕಡಿಮೆ, ಕೆಲಸ ಹೆಚ್ಚು. ಅವರು ಸಮಾಜಕ್ಕಾಗಿ ಒಳ್ಳೇ ಕೆಲಸ ಮಾಡಿದ್ದಾರೆ. ಇವರ ಬೆಂಬಲಕ್ಕೆ ಸಮಾಜ, ರೈತರು ನಿಲ್ಲಬೇಕು ಎಂದರು.

ಕೆಸರಟ್ಟಿಯ ಸೋಮಲಿಂಗ ಮಹಾರಾಜರು, ಕುಂಟೋಜಿಯ ಡಾ. ಶ್ರೀ ಗುರು ಚೆನ್ನವೀರ ಶಿವಾಚಾರ್ಯರು, ಹಿರೂರನ ಗುರುಜಯಸಿದ್ದೇಶ್ವರ ಶಿವಾಚಾರ್ಯರು, ಬಸವನ ಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯರು ದಿವ್ಯಸಾನಿಧ್ಯ ವಹಿಸಿದ್ದರು.

ಎಂಎಲ್‌ಸಿ ಪ್ರಕಾಶ ರಾಠೋಡ, ಗಣ್ಯರಾದ ಚಂದ್ರಶೇಕರ ಸೀತಿಮನಿ, ಡಾ. ತಾರಾನಾಥ ಸೀತಿಮನಿ, ವಿಠ್ಠಲ ಸೀತಿಮನಿ, ಚಿದಾನಂದ ಸೀತಿಮನಿ, ಸಿ.ಬಿ. ಅಸ್ಕಿ, ಗುರು ತಾರನಾಳ, ಎಂ.ಬಿ. ನಾವದಗಿ, ಮಲ್ಲಿಕಾರ್ಜುನ ತಂಗಡಗಿ, ಪರಶುರಾಮ ಢವಳಗಿ, ಚಂದ್ರಶೇಖರ ನಾಯಕ, ಸತೀಶ ಓಸ್ವಾಲ್, ಸುನೀಲ ಇಲ್ಲೂರ, ಸಿ.ಪಿ. ಸಜ್ಜನ ಹಲವರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ರವಿ ನಾಯಕ, ಚಿದಾನಂದ ಸೀತಿಮನಿ ಪರಿವಾರದವರಿಂದ ವಿಶೇಷ ಪೂಜೆ ಪುನಸ್ಕಾರ ನಡೆಸಲಾಯಿತು. ಮಹಾದ್ವಾರ ನಿರ್ಮಾಣಕ್ಕೆ ಕಾರಣರಾದ ರವಿ ನಾಯಕ, ಮೂರ್ತಿ ತಯಾರಕರು ಸೇರಿ ಹಲವರನ್ನು ಗೌರವಿಸಲಾಯಿತು. ತಡವಾಗಿ ಆಗಮಿಸಿದ ಸಚಿವ ಶಿವಾನಂದ ಪಾಟೀಲ ಅವರು ದುರ್ಗಾದೇವಿಯ ದರ್ಶನ ಪಡೆದು ಶುಭ ಕೋರಿದರು.