ಚಾಮರಾಜನಗರ : ಯಳಂದೂರು ತಾಲೂಕಿನ ಶಿವಕಳ್ಳಿ, ಎ.ದೇವರಹಳ್ಳಿ, ಟಿ.ಹೊಸೂರು ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಶನಿವಾರ ಭೂಮಿಪೂಜೆ ನೆರವೇರಿಸಿದರು.
ಶಿವಕಳ್ಳಿ ಗ್ರಾಮದಲ್ಲಿ ಮಾತನಾಡಿ, ಈ ರಸ್ತೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಒಟ್ಟು 1.5 ಕೋಟಿ ರೂ. ವೆಚ್ಚದ ರಸ್ತೆಗೆ ಪ್ರಥಮ ಕಂತಿನಲ್ಲಿ 50-54ರ ಲೆಕ್ಕ ಶೀರ್ಷಿಕೆ ಯೋಜನೆಯಡಿ 38 ಲಕ್ಷ ರೂ. ಬಿಡುಗಡೆಯಾಗಿದೆ. ಶಿವಕಳ್ಳಿ, ಎ.ದೇವರಹಳ್ಳಿ ಗ್ರಾಮಗಳಿಗೆ ತಲಾ 12 ಲಕ್ಷ ರೂ. ಟಿ.ಹೊಸೂರು ಗ್ರಾಮಕ್ಕೆ 14 ಲಕ್ಷ ರೂ. ಬಿಡುಗಡೆಯಾಗಿದೆ. ಇದರಲ್ಲಿ ಚರಂಡಿ, ರಸ್ತೆ, ಮೆಟ್ಲಿಂಗ್ ಕಾಮಗಾರಿಗಳು ನಡೆಯಲಿದೆ. ಮುಂದಿನ ದಿನಗಳಲ್ಲಿ ಇದರ ಪೂರ್ಣ ಪ್ರಮಾಣದ ಹಣವನ್ನು ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು. ಈ ಗ್ರಾಮಗಳಿಗೆ ಯಳಂದೂರು ಹಾಗೂ ಕೊಳ್ಳೇಗಾಲಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೂ ತೀವ್ರ ಹದಗೆಟ್ಟಿದ್ದು ಈ ರಸ್ತೆ ದುರಸ್ತಿಗೂ ಕ್ರಮ ವಹಿಸಲಾಗುವುದು ಎಂದರು.
ಶಿವಕಳ್ಳಿ ಗ್ರಾಮಸ್ಥರು ಸಮುದಾಯ ಭವನ, ಸ್ಮಶಾನ ನಿರ್ಮಾಣಕ್ಕೆ ಸ್ಥಳ ಹಾಗೂ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂಧಿಸಿದ ಶಾಸಕರು ಕೂಡಲೇ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಕೆಆರ್‌ಐಡಿಎಲ್‌ನ ಎಇಇ ಚಿಕ್ಕಲಿಂಗಯ್ಯ, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ತಾಪಂ ಮಾಜಿ ಸದಸ್ಯ ವೆಂಕಟಾಚಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ವಿ.ಚಂದ್ರು, ತೋಟೇಶ್, ಸತೀಶ, ಹೊನ್ನೂರು ರಾಘವೇಂದ್ರ, ಕಿನಕಹಳ್ಳಿ ಪ್ರಭುಪ್ರಸಾದ್, ಗುತ್ತಿಗೆದಾರ ಪಿ. ನಾಗರಾಜಗೌಡ, ಜಗದೀಶ್ ಇದ್ದರು.