ಜಿಲ್ಲೆ

ಸಿಎಂಗೆ ಬಿಗಿಯಾಗುತ್ತಿರುವ ಕುಣಿಕೆ,   ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿಕೆ

Dharwada - Basavaraj Idli

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾನೂನಿನ ಕುಣಿಕೆ ಗಟ್ಟಿಯಾಗುತ್ತ ಹೋಗುತ್ತಿದೆ. ಅವರು ಯಾವಾಗ ರಾಜಿನಾಮೆ ಕೊಡುತ್ತಾರೆ ಎಂದು ಭವಿಷ್ಯ ಹೇಳುವುದಿಲ್ಲ. ಆದರೆ, ಅವರು ರಾಜಿನಾಮೆ ಕೊಡುವುದು ಅನಿವಾರ್ಯವಾಗಲಿದೆ ಎಂದು ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಸಿವಿಲ್ ಕೇಸ್ ಎಂದು ಹೇಳುವ ಮೂಲಕ ಡಾ. ಜಿ. ಪರಮೇಶ್ವರ್ ಅವರು ಸಿಎಂಗೆ ಆಪ್ತರಾಗಲು ಮುಂದಾಗಿದ್ದಾರೆ. ಅವರೂ ಸೇರಿ ಎಲ್ಲರಿಗೂ ಸಿಎಂ ರಾಜಿನಾಮೆ ಕೊಡುವುದು ಗೊತ್ತಿದೆ. ಹಾಗಾಗಿ ಈಗಲೇ ಟವೆಲ್ ಹಾಕಿಕೊಂಡು ಕುಳಿತಿದ್ದಾರೆ. ಡಾ. ಪರಮೇಶ್ವರ ತಮ್ಮನ್ನೇ ಶಿಫಾರಸು ಮಾಡಲಿ ಎಂದುಕೊಂಡು ಅವರ ಪರ ಬ್ಯಾಟಿಂಗ್ ಮಾಡಿರಬಹುದು ಎಂದು ಟಾಂಗ್ ನೀಡಿದರು.

ಇದೇ ರೀತಿ ಸಿಎಂ ಸ್ಥಾನಕ್ಕಾಗಿ ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ಸೇರಿ ಹಲವರು ಕ್ಯೂ ನಿಂತಿದ್ದಾರೆ ಎಂದು ಹೇಳಿದರು.

ಹಳೇಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಗಳು 17 ಬಾರಿ ಜಾಮೀನು ಅರ್ಜಿ ಸಲ್ಲಿಸಿದರೂ ಕೋರ್ಟ್ ನಲ್ಲಿ ರಿಜೆಕ್ಟ್ ಆಗಿವೆ. ಎನ್ಐಎ ಕೂಡ ತನಿಖೆ ನಡೆಸುತ್ತಿದೆ. ಇಂತಹ ಕೇಸ್ ವಾಪಸ್ ಪಡೆದ ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ. ಈ ವಿಚಾರದಲ್ಲಿ ವಕೀಲರು ಕಾನೂನು ಹೋರಾಟ ಮುಂದುವರಿಸಿದ್ದಾರೆ ಎಂದರು.

ಕುಟುಂಬ ರಾಜಕಾರಣ ಇಲ್ಲ:
ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಗೆ ಟಿಕೆಟ್ ಘೋಷಣೆಯಾಗಿದೆ. ಇದು ಕುಟುಂಬ ರಾಜಕಾರಣ ಅಲ್ಲ. ಅಲ್ಲಿನ ಕಾರ್ಯಕರ್ತರ ಅಭಿಪ್ರಾಯವನ್ನು ಹೈಕಮಾಂಡ್ ಪಡೆದಿದೆ. ಉಪಚುನಾವಣೆಯಲ್ಲಿ ಮುಖ್ಯವಾಗಿ ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕಬೇಕಾಗುತ್ತದೆ ಎಂದು ಬೆಲ್ಲದ ಹೇಳಿದರು.

ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿಯ ನಾಯಕತ್ವವನ್ನು ಜನರು ಸೇರಿ ಮಾಡಿದ್ದಲ್ಲ. ಪಕ್ಷದವರೇ ನಾಮನಿರ್ದೇಶನ ಮಾಡಿರುವುದು. ಆದರೆ, ಬಿಜೆಪಿ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತದೆ ಎಂದು ಬೆಲ್ಲದ ಸಮರ್ಥಿಸಿಕೊಂಡರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ. ಯೋಗೇಶ್ವರ ಮೈತ್ರಿ ಅಭ್ಯರ್ಥಿಯಾಗುವ ಬಗ್ಗೆ ಒಲವಿದೆ. ಈ ಬಗ್ಗೆ ಪಕ್ಷದಲ್ಲಿ ಈಗಾಗಲೇ ಚರ್ಚೆಯೂ ನಡೆದಿದೆ. ಎಚ್.ಡಿ. ಕುಮಾರಸ್ವಾಮಿ ಅವರು ಪ್ರಬುದ್ಧ ರಾಜಕಾರಣಿ. ಅವರು ಅಭ್ಯರ್ಥಿ ಕುರಿತು ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಭರವಸೆ ಇದೆ ಎಂದರು.

ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಮೈತ್ರಿ ಧರ್ಮ ಪಾಲನೆಯಾಗುತ್ತಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಚುನಾವಣೆಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ ಎಂದರು.

ಶಾಸಕ ಎಂ.ಆರ್. ಪಾಟೀಲ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ರವಿ ನಾಯಕ ಇದ್ದರು.