ಹಲಗೂರು(ಮಂಡ್ಯ ಜಿಲ್ಲೆ): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 110 ಹಳ್ಳಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿತ್ತು. ಈಗ ಕಾವೇರಿ ಐದನೇ ಹಂತದ ಯೋಜನೆ ಲೋಕಾರ್ಪಣೆ ಆಗುತ್ತಿರುವುದು ಹೆಮ್ಮೆಯ ವಿಚಾರ ಎಂದು ಕೆ.ಆರ್.ಪುರ ಕ್ಷೇತ್ರದ ಶಾಸಕ ಭೈರತಿ ಬಸವರಾಜ್ ಹೇಳಿದರು.
ಸಮೀಪದ ಟಿ.ಕೆ.ಹಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಗೆ ಸಂಬಂಧಿಸಿದಂತೆ ನಾನು ಕೂಡ ಈ ಕೆಲಸಕ್ಕೆ ಹಿಂದೆ ಸಿದ್ದರಾಮಯ್ಯಗೆ ಒತ್ತಾಯ ಮಾಡಿದ್ದೇವು. ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದಲ್ಲಿಯೂ ಸ್ಥಳ ಪರಿಶೀಲನೆ ನಡೆಸಲಾಗಿತ್ತು. ಕಾಮಗಾರಿ ಬೇಗ ಮುಗಿಸಲು ಅಧಿಕಾರಿಗೆ ಸೂಚನೆ ನೀಡಲಾಗಿತ್ತು. ಆದರೆ ಕೋವಿಡ್‌ನಿಂದ 1.5 ವರ್ಷ ಕಾಮಗಾರಿ ಮಾಡಲು ಆಗಲಿಲ್ಲ. ಇವತ್ತು ಆ ಕೆಲಸ ಪೂರ್ಣಗೊಂಡಿರುವುದು ಸಂತಸದ ವಿಷಯ. ಇದರಲ್ಲಿ ರಾಜಕೀಯ ಬೆರೆಸುದು ಬೇಡ ಎಂದರು.
ಬೆಂಗಳೂರಿನ ಒಳಿತಿಗಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀನಿ. ಜನರ ನೀರಿನ ಬವಣೆ ತೀರಸಲು ಶಾಸಕರು, ಸರ್ಕಾರ ಬದ್ಧವಾಗಿದ್ದೇವೆ. ನಮಗೆ ಕುಡಿಯುವ ನೀರಿನ ಅವಶ್ಯಕತೆ ಇದೆ. ಅದಕ್ಕಾಗಿ 110 ಹಳ್ಳಿಗಳ ವ್ಯಾಪ್ತಿ ಶಾಸಕರು ಬಂದಿದ್ದಾರೆ. ಐದನೇ ಹಂತಕ್ಕೆ ಈ ಯೋಜನೆ ನಿಲ್ಲದಿರಲಿ. ಆರನೇ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳಲಿ ಎಂದು ಒತ್ತಾಯಿಸಿದರು.
ಬೆಂಗಳೂರಲ್ಲಿ ಮಳೆ ಅವಾಂತರದ ಬಗ್ಗೆ ಪ್ರತಿಕ್ರಿಯಿಸಿ, ಯಥೇಚ್ಛವಾಗಿ ಮಳೆಯಾಗಿದೆ. ಬಹಳಷ್ಟು ಕಡೆ ಜನರಿಗೆ ತೊಂದರೆಯಾಗಿದ್ದು, ನಾವು ಆ ಸ್ಥಳಕ್ಕೆ ಭೇಟಿ ಕೊಟ್ಟಿದ್ದೇವೆ. ಮಳೆಯನ್ನ ಯಾರು ತಡೆಯಲು ಸಾಧ್ಯವಿಲ್ಲ. ಹಂತ ಹಂತವಾಗಿ ಬೆಂಗಳೂರು ಅಭಿವೃದ್ದಿಯಾಗಲಿದೆ. ಈ ಸಂಬಂಧ ಡಿಸಿಎಂ ಡಿಕೆಶಿ ಜತೆ ಚರ್ಚೆ ಮಾಡಿದ್ದೇನೆ. ಬೆಂಗಳೂರು ಜನತೆ ನೆಮ್ಮದಿಯಾಗಿ ಇರುವ ವಾತಾವರಣ ನಿರ್ಮಾಣ ಮಾಡುತ್ತೇವೆ. ರಾಜ್ಯಸರ್ಕಾರ ಕೂಡ ಬೇಗ ಹಣ ಬಿಡುಗಡೆ ಮಾಡಬೇಕಿತ್ತು. ಕೆಲವು ಒತ್ತುವರಿ ತೆರವು ಮಾಡಿದರಷ್ಟೆ ಸಮಸ್ಯೆ ಬಗೆಹರಿಸಬಹುದು ಎಂದು ಅಭಿಪ್ರಾಯಿಸಿದರು.