ಜಿಲ್ಲೆ

ಶಿಕ್ಷಣದ ಜತೆ ಇರಲಿ ಪ್ರಪಂಚ ಜ್ಞಾನ

ಚನ್ನಗಿರಿ: ಪದವಿ ವ್ಯಾಸಂಗ ಜೀವನ ರೂಪಿಸುವ ಹಂತವಾಗಿದ್ದು, ವಿದ್ಯಾರ್ಥಿಗಳು ಮನಸ್ಸನ್ನು ಹರಿಬಿಡದೆ ಓದಿನ ಕಡೆ ಕೇಂದ್ರೀಕೃತವಾದರೆ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಶಾಸಕ ಬಸವರಾಜ್ ಶಿವಗಂಗಾ ಹೇಳಿದರು.

ಇಲ್ಲಿನ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್​ಎಸ್​ಎಸ್, ಯುವ ರೆಡ್​ಕ್ರಾಸ್ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮೊಬೈಲ್​ಗೆ ಮೀಸಲಿಡುವ ಸಮಯವನ್ನು ಓದಿಗೆ ಕೊಡಿ. ಪುಸ್ತಕವನ್ನು ತಲೆ ತಗ್ಗಿಸಿ ಓದಿದರೆ, ಅದು ನಿಮ್ಮನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ ಎಂದು ಅಂಬೇಡ್ಕರ್ ಹೇಳಿದ ಮಾತು ನೈಜವಾದುದು ಎಂದರು.

ಶಿಕ್ಷಣದ ಜತೆಗೆ ಹೊರ ಪ್ರಪಂಚದ ಬಗ್ಗೆ ಜ್ಞಾನವಿರಬೇಕು. ಪಾಲಕರು ಕಷ್ಟಪಟ್ಟು ಹಣವನ್ನು ಕ್ರೋಡೀಕರಿಸಿ ನಿಮಗೆ ಉನ್ನತ ವ್ಯಾಸಂಗವನ್ನು ನೀಡುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಸಮಯ ವ್ಯರ್ಥ ಮಾಡದೆ ಓದಿನತ್ತ ಗಮನ ಹರಿಸಿ ಎಂದು ಹೇಳಿದರು.

ಈ ಪ್ರಥಮ ದರ್ಜೆ ಕಾಲೇಜು ವಿಶ್ವವಿದ್ಯಾಲಯದಂತೆ ಇರಬೇಕು ಎನ್ನುವ ಕಾರಣಕ್ಕೆ ಅಡಿಟೋರಿಯಂ ಮರು ನಿರ್ವಣಕ್ಕೆ 90 ಲಕ್ಷ ರೂ., ಬಿಸಿಎ ಕೋರ್ಸ್ ಕಟ್ಟಡಕ್ಕೆ 1.3 ಕೋಟಿ ರೂ., ಸ್ನಾತಕೋತ್ತರ ಕಟ್ಟಡ ನಿರ್ವಣಕ್ಕೆ 2.5 ಕೋಟಿ ರೂ. ಅನುದಾನ ನೀಡಲಾಗಿದೆ. ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ. ಇದರ ಬದಲಾಗಿ ನನಗೆ ಉತ್ತಮ ಫಲಿತಾಂಶ ನೀಡಬೇಕು ಎಂದರು.

ಶಿವಮೊಗ್ಗ ಸಮಾಜ ಸೇವಕ, ಲೇಖಕ ಡಾ. ರಾಹುಲ್ ದೇವರಾಜ್ ಮಾತನಾಡಿ, ವಿದ್ಯೆಗೆ ಅದ್ಭುತವಾದ ಶಕ್ತಿಯಿದೆ. ಅಂಕ ಪಡೆಯುವ ಸಲುವಾಗಿ ಓದದೆ ಜೀವನವನ್ನು ರೂಪಿಸಿಕೊಳ್ಳುವ ಸಲುವಾಗಿ ಕಲಿಕೆಯಲ್ಲಿ ಆಸಕ್ತಿ ತೋರಿಸಿ. ಖಾಸಗಿ ಶಾಲೆಯಲ್ಲಿ ಕಲಿತರೆ ಮಾತ್ರ ಸರ್ಕಾರಿ ಕೆಲಸ ಸಿಗುತ್ತದೆ ಎನ್ನುವುದು ಭ್ರಮೆ. ಸರ್ಕಾರಿ ಶಾಲೆಯಲ್ಲಿ ಕಲಿತವರೆಲ್ಲರೂ ಸಾಧಕರಾಗಿದ್ದಾರೆ ಎಂದು ಹೇಳಿದರು.

ಐಎಎಸ್, ಐಪಿಎಸ್ ಪರೀಕ್ಷೆಗಳಲ್ಲಿ ಹೆಚ್ಚಾಗಿ ಉತ್ತೀರ್ಣರಾಗುತ್ತಿರುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು. ಆಸಕ್ತಿ ಇದ್ದರೆ ಯಾವುದೇ ಪರೀಕ್ಷೆಯನ್ನು ಸುಲಭವಾಗಿ ಪಾಸ್ ಮಾಡಬಹುದು ಎಂದರು.

ಪ್ರಾಚಾರ್ಯ ಬಿ.ಜಿ. ಅಮೃತೇಶ್ವರ, ಗಾಯಕ ಶಶಿಕಿರಣ್, ಲಯನ್ಸ್ ಕ್ಲಬ್ ಅಧ್ಯಕ್ಷ ನಾಗರಾಜ್ ನಾಡಿಗ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಜ್ಯೋತಿಕೋರಿ, ಜೆ. ಜ್ಯೋತಿಪ್ರಸಾದ್, ಸಿ.ವೈ. ರವಿಕುಮಾರ್, ಸಿ.ಆರ್. ನಾಗರಾಜ್, ಸಿ. ರಮೇಶ್, ಎಸ್.ಎಸ್.ಮಧುಕುಮಾರ್ ಇತರರು ಇದ್ದರು.