ಮಂಡ್ಯ: ನೆಹರೂ, ಇಂದಿರಾಗಾಂಧಿಗೆ ಆರ್‌ಎಸ್‌ಎಸ್ ನಿಷೇಧ ಮಾಡಲು ಆಗಲಿಲ್ಲ. ಮುಸ್ಲಿಮರನ್ನು ಖುಷಿ ಪಡಿಸಲು ಪ್ರಿಯಾಂಕ್ ಖರ್ಗೆ ಎನ್ನುವ ಈ ಬಚ್ಚಾ ಏನೇನೋ ಮಾತಾಡುತ್ತಾನೆ. ಅವನೊಬ್ಬ ಶತಮೂರ್ಖ. ಸೂರ್ಯ, ಚಂದ್ರ ಇರುವವರೆಗೂ ಆರ್‌ಎಸ್‌ಎಸ್ ಇರುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮಗ ಯತೀಂದ್ರ, ಹರಿಪ್ರಸಾದ್ ಎಂಬುವವರು ಪಾಕಿಸ್ತಾನದ ಏಜೆಂಟ್ ರೀತಿ ಮಾತನಾಡುತ್ತಾರೆ. ಮುಸ್ಲಿಂರಂತೆ ಆರ್‌ಎಸ್‌ಎಸ್ ಏನೂ ಕಬ್ಜ ಮಾಡಿಕೊಂಡಿಲ್ಲ. ಯತೀಂದ್ರ ಏನು ಮಾತಾಡುತ್ತಾನೆಂದೂ ಗೊತ್ತೆ ಆಗುವುದಿಲ್ಲ. ಆರ್‌ಎಸ್‌ಎಸ್‌ನವರು ಶಾಖೆ ನಡೆಸಿ ಭಾರತದ ಮಾತೆಗೆ ಪ್ರಾರ್ಥನೆ ಮಾಡಿ ಹೋಗುತ್ತಾರೆ. ಮಸೀದಿ ಆದಾಯವು ಸರ್ಕಾರಕ್ಕೆ ಬರುತ್ತಿದಿಯಾ?. ಇನ್ನೆರಡು ವರ್ಷ ಹಾರಾಡು ಪ್ರಿಯಾಂಕ್ ಖರ್ಗೆ, ಆಮೇಲೆ ಹಿಂದು ಸರ್ಕಾರ ಬರುತ್ತದೆ. ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿರಬಹುದು. ಆದರೆ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸುವುದು ಅಷ್ಟು ಸುಲಭವಲ್ಲ ಎಂದರು.
ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿಗೆ ಕರೆತಂದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿಗೆ ಕರೆತರುವ ಪ್ಲ್ಯಾನ್ ಇತ್ತು. ನಾನು ಉಚ್ಚಾಟನೆ ಆದ ದಿನ ರಾಷ್ಟ್ರೀಯ ನಾಯಕರೊಬ್ಬರು ಕರೆ ಮಾಡಿದ್ದರು. ಡಿಕೆಶಿ ಅವರನ್ನು ಸಿಎಂ, ವಿಜಯೇಂದ್ರ ಅವರನ್ನು ಡಿಸಿಎಂ ಮಾಡುವ ಪ್ಲ್ಯಾನ್ ನಡೆಯುತ್ತಿದೆ ಎಂದಿದ್ದರು. 90 ಶಾಸಕರನ್ನು ಕರೆತರುತ್ತಾರೆ ಎಂದು ಕೊಂಡಿದ್ದರು. ಆದರೆ 15 ಜನ ಶಾಸಕರಷ್ಟೇ ಡಿಕೆಶಿ ಪರ ಎಂದು ಗೊತ್ತಾದ ಮೇಲೆ ಪ್ಲ್ಯಾನ್ ಕೈಬಿಟ್ಟರು ಎಂದು ವ್ಯಂಗ್ಯವಾಡಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ನವೆಂಬರ್ ಕ್ರಾಂತಿ ಆಗಬಹುದು. ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ ಎನ್ನುವ ಅಸಮಾಧಾನವು ಕಾಂಗ್ರೆಸ್‌ನಲ್ಲಿದ್ದರೆ, ನಾಯಕತ್ವ ಬದಲಾವಣೆ ಕಾಂತ್ರಿ ಬಿಜೆಪಿಯಲ್ಲಿದೆ. ನನ್ನನ್ನು ಉಚ್ಚಾಟನೆ ಮಾಡಿದ್ದು ಬಿಜೆಪಿ, ಜನರಲ್ಲ. ಹಿಂದುಗಳ ಮತಗಳ ವಿಭಜನೆ ನನ್ನ ಉದ್ದೇಶವಲ್ಲ. ಉತ್ತರ ಪ್ರದೇಶದದಲ್ಲಿ ಆಡಳಿತ ನಡೆಸುತ್ತಿರುವ ಯೋಗಿ ಆದಿತ್ಯನಾಥ್ ಅವರ ಮಾದರಿಯ ಬಿಜೆಪಿಯನ್ನು ರಾಜ್ಯದ ಜನರು ಬಯಸುತ್ತಿದ್ದಾರೆ. ಒಂದಿಬ್ಬರು ಬಿಜೆಪಿ ಸಂಸದರು ಬಿಟ್ಟರೆ, ಇನ್ನುಳಿದವರಿಂದಲೇ ನನ್ನ ಉಚ್ಚಾಟನೆಗೆ ವಿರೋಧವಿದೆ. ಹಿಂದುಗಳ ಸಂಘಟನೆ ನನ್ನ ಗುರಿ. ಹಿಂದುಗಳ ಪರವಾಗಿ ಗಟ್ಟಿಧ್ವನಿ ಬೇಕಾಗಿದೆ. ಅದಕ್ಕಾಗಿ ರಾಜ್ಯ ಪ್ರವಾಸ ಮಾಡುತ್ತಿರುವೆ ಎಂದು ತಿಳಿಸಿದರು.