ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ವಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ ಸುದ್ದಿಗೋಷ್ಠಿ ನಡೆಸಿದರು.  
ಜಿಲ್ಲೆ

ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕಿಡಿ, ಭೀಮಾಶಂಕರ ಹದನೂರ ಪ್ರಶ್ನೆ, ಬಿಜೆಪಿಯಲ್ಲಿ ಯಾರು ಅಸಲಿ-ಇನ್ನಾರು ನಕಲಿ?

ವಿಜಯಪುರ: ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಫಲಿತಾಂಶ ಘೋಷಣೆ ಸಂದರ್ಭ ಬಿಜೆಪಿಯಲ್ಲಿರುವವರನ್ನು ನಕಲಿ ಎಂದು ಆಪಾದಿಸಿರುವ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಯಾರು ಅಸಲಿ-ಇನ್ನಾರು ನಕಲಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ವಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ ಟಾಂಗ್ ನೀಡಿದರು.

‘ತಾವು ಮಾಡಿದ್ದೇ ಸರಿ-ಬೇರೆಯವರು ಮಾಡಿದರೆ ತಪ್ಪು’ ಎಂಬ ಚಾಳಿ ಯತ್ನಾಳರದ್ದು. ಈ ಹಿಂದೆ ತಾವು ನಡೆದು ಬಂದ ದಾರಿಯನ್ನೊಮ್ಮೆ ಅವಲೋಕಿಸಿದರೆ ಅಸಲಿ ಮತ್ತು ನಕಲಿ ಯಾರು ಎಂಬುದು ಗೊತ್ತಾಗಲಿದೆ. ಬಿಜೆಪಿಯಿಂದ ಉಚ್ಚಾಟನೆಗೊಂಡ ನೀವು ಅಸಲಿ ಮತ್ತು ನಕಲಿ ಕುರಿತು ಮಾತನಾಡುವ ಮುನ್ನ ನೀವೆಷ್ಟು ಅಸಲಿ ಮತ್ತು ನಕಲಿ ಎಂಬುದನ್ನು ಸಾಬೀತುಪಡಿಸಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಸವಾಲೆಸೆದರು.

ಅಟಲ್ ಬಿಹಾರಿ ವಾಜಪೇಯಿ ಮಂತ್ರಿ ಮಂಡಲದಲ್ಲಿ ಸಚಿವನಾಗಿದ್ದೆ ಎಂದು ಪದೇ ಪದೇ ವಾಜಪೇಯಿ ಹೆಸರು ಬಳಸುವ ಯತ್ನಾಳ ಅವರು ಅಣ್ವಸ್ತ್ರ ಒಪ್ಪಂದದ ವೇಳೆ ಬಿಟ್ಟು ಹೋಗಿದ್ದೇಕೆ? 2008 ರಲ್ಲಿ ದೇವರಹಿಪ್ಪರಗಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭ ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಪ್ಪಾಸಾಹೇಬ ಪಟ್ಟಣಶೆಟ್ಟಿ ವಿರುದ್ಧ ತಮ್ಮ ಸಹೋದರ ಈಶ್ವರಗೌಡ ಅವರನ್ನು ನಿಲ್ಲಿಸಿದ್ದೇಕೆ?2013 ರಲ್ಲಿ ಜೆಡಿಎಸ್‌ಗೆ ಹೋಗಿದ್ದೇಕೆ? ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ವಿರುದ್ಧವೇ ಸ್ವತಂತ್ರವಾಗಿ ಕಣಕ್ಕಿಳಿದಿದ್ದೇಕೆ? ಇಷ್ಟೆಲ್ಲಾ ಆದ ನಂತರವೂ ಇದೀಗ ಬಿಜೆಪಿಯಿಂದ ಉಚ್ಚಾಟಿಸಲ್ಪಟ್ಟಿದ್ದರೂ ಬಿಜೆಪಿಯಲ್ಲಿರುವವರನ್ನೇ ನಕಲಿ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದರು.

ನಡೆದಾಡುವ ದೇವರೆಂದು ಖ್ಯಾತಿ ಪಡೆದ ಸಿದ್ಧೇಶ್ವರ ಸ್ವಾಮೀಜಿಗೇ ಸುಳ್ಳು ಹೇಳಿದ ವ್ಯಕ್ತಿ ಯತ್ನಾಳ. ಅಟಲ್‌ಬಿಹಾರಿ ವಾಜಪೇಯಿ ಅವರ ಮೂರ್ತಿ ನಿಲ್ಲಿಸುವಾಗ ವರ್ಚುವಲ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆಂದು ಸುಳ್ಳು ಹೇಳಿ ಪೂಜ್ಯರನ್ನು ಕಾರ್ಯಕ್ರಮಕ್ಕೆ ಕರೆದೊಯ್ದ ವ್ಯಕ್ತಿ ಯತ್ನಾಳ ಎಂದು ಹರಿಹಾಯ್ದರು.

ಪದೇ ಪದೇ ಬಿಜೆಪಿ ಹೈಕಮಾಂಡ್‌ಗೆ ಟೀಕಿಸುವ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಅವರನ್ನು ಟೀಕಿಸುವ ಯತ್ನಾಳ ಹಿಂದೆ ಅದೇ ಯಡಿಯೂರಪ್ಪ ಅವರಿಂದಾಗಿ ಪಕ್ಷಕ್ಕೆ ಮರಳಿ ಸೇರ್ಪಡೆಯಾಗಿದ್ದು ಮರೆತರು. ಇದೀಗ ಮತ್ತೆ ಪಕ್ಷಕ್ಕೆ ಸೇರ್ಪಡೆಯಾಗಲು ಹವಣಿಸುತ್ತಿರುಬಹುದು. ಪಕ್ಷವೂ ಅವರನ್ನು ಮತ್ತೆ ತೆಗೆದುಕೊಂಡರೂ ತೆಗೆದುಕೊಳ್ಳಬಹುದು ಎಂದು ಅಚ್ಚರಿ ವ್ಯಕ್ತಪಡಿಸಿದ ಹದನೂರ ಅವರು ಅದಕ್ಕೂ ಮೊದಲು ಯತ್ನಾಳ ಇಷ್ಟೆಲ್ಲಾ ಆದ ಮೇಲೂ ತಾವು ಬಿಜೆಪಿಗೆ ಹೇಗೆ ಅಸಲಿ ಎಂದು ಸಾಬೀತು ಪಡಿಸಲಿ ಎಂದು ಸವಾಲೆಸೆದರು.