ಜಿಲ್ಲೆ

ಸಿಎಂ ಸಲಹೆಗಾರರಾಗಿ ಬಿ.ಆರ್.ಪಾಟೀಲ್ ನೇಮಕ

ಆಳಂದ ಶಾಸಕರಾದ ಬಿ.ಆರ್.ಪಾಟೀಲ್ ಅವರನ್ನು ಮುಖ್ಯಮಂತ್ರಿಗಳ  ಸಲಹೆಗಾರರಾಗಿ ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಹಿರಿಯ ಸಮಾಜವಾದಿ ಚಿಂತಕರಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಮುಖ ಹುದ್ದೆಯನ್ನು ನೀಡಿದಂತಾಗಿದೆ.  

ಬಾಬುರಾವ ಯಡ್ರಾಮಿ


ವಿಜಯವಾಣಿ ಸುದ್ದಿಜಾಲ ಕಲಬುರಗಿ

ಆಳಂದ ಶಾಸಕರಾದ ಬಿ.ಆರ್.ಪಾಟೀಲ್ ಅವರನ್ನು ಮುಖ್ಯಮಂತ್ರಿಗಳ  ಸಲಹೆಗಾರರಾಗಿ ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ಹಿರಿಯ ಸಮಾಜವಾದಿ ಚಿಂತಕರಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಮುಖ ಹುದ್ದೆಯನ್ನು ನೀಡಿದಂತಾಗಿದೆ.  
ಸಂಪುಟ ದರ್ಜೆ ಸ್ಥಾನಮಾನ ನೀಡಿ ಬಿ.ಆರ್.ಪಾಟೀಲ್‌ರನ್ನು ಸಿಎಂ ಸಲಹೆಗಾರರು ಎಂದು ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಮೊಹ್ಮದ ಅಕ್ಬರ್ ಶುಕ್ರವಾರ  ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಕಲಬುರಗಿ ಜಿಲ್ಲೆಯ ನಾಲ್ವರಿಗೆ ಸಂಪುಟ ದರ್ಜೆ ಸ್ಥಾನಮಾನ ದೊರೆತಂತಾಗಿದೆ.
ಬಿ.ಆರ್.ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಲ್ಲಿ ಒಬ್ಬರು. ಆಪ್ತ ಗೆಳೆಯರು ಹೌದು. ಇಬ್ಬರು ಸಮಾಜವಾದ ಚಿಂತನೆಯ ಹೋರಾಟದಿಂದಲೇ ರಾಜಕೀಯ ಪ್ರವೇಶ ಮಾಡಿದವರು. ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೇ ಅವರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಎಲ್ಲರಲ್ಲಿ ಇತ್ತು. ಆದರೆ, ಕೆಲ ಬೆಳವಣಿಗೆಗಳು ಸಚಿವ ಸ್ಥಾನ ವಂಚಿತರನ್ನಾಗಿಸಿತು. ಅವರಿಗೆ ಮುಖ್ಯಮಂತ್ರಿಗಳು ಸಮಾಧಾನಗೊಳಿಸಿ, ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದರು. ಈಗ ಅವರಿಗೆ ತಮ್ಮ ಸಲಹೆಗಾರರಾಗಿ ನೇಮಿಸಿಕೊಂಡಿದ್ದಾರೆ.
ಪಾಟೀಲ್ ಅವರು ಈ ಹಿಂದೆ ಉಪ ಸಭಾಪತಿಗಳಾಗಿ ಕೆಲಸ ಮಾಡಿದ್ದಾರೆ. ಆಳಂದ ಕ್ಷೇತ್ರದಿಂದ ವಿಧಾನ ಸಭೆ ಪ್ರವೇಶಿಸುತ್ತಾ ಬಂದಿದ್ದಾರೆ. ಚುನಾವಣೆಗೆ ಮೊದಲು ಜರುಗಿದ ಪ್ರಚಾರ ಸಭೆಯಲ್ಲಿ ನೀವು ಬಿಆರ್‌ರನ್ನು ಗೆಲ್ಲಿಸಿ ಅವರಿಗೆ ಸೂಕ್ತ ಸ್ಥಾನ ನೀಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಹೀಗಾಗಿ ಬಿ.ಆರ್.ಸಚಿವರಾಗುತ್ತಾರೆ ಎಂದುಕೊAಡಿದ್ದರು. ಆದರೆ, ಈಗ ಅವರಿಗೆ  ಮಹತ್ವದ ಸ್ಥಾನ ನೀಡುವ ಮೂಲಕ ಸಮಾಧಾನಗೊಳಿಸುವ ಪ್ರಯತ್ನಗಳಲ್ಲಿ ಇದು ಒಂದಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತದೆ.
ಪಕ್ಷದ ನಾಯಕರೆಲ್ಲರು ಮತ್ತು  ಸಿಎಂ ಹಾಗೂ ಡಿಸಿಎಂ ಎಲ್ಲರು ಸೇರಿಕೊಂಡು ಸಿಎಂ ಸಲಹೆಗಾರರಾಗಿ ನೇಮಕ ಮಾಡಿದ್ದು ಖುಷಿ ತರಿಸಿದೆ. ಪಕ್ಷ ನೀಡಿದ ಹೊಣೆಯನ್ನು ವಹಿಸಿಕೊಂಡು ಸರ್ಕಾರದ ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಪ್ರತಿಕ್ರಿಯಿಸಿರುವ ಬಿ.ಆರ್.ಪಾಟೀಲ್‌ರು ಪಕ್ಷದ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
--ಕೋಟ್--
ಜೆಪಿ, ಲೋಹಿಯಾ ಚಳುವಳಿಯಿಂದ ಬಂದಿರುವ ಶಾಸಕ ಬಿ.ಆರ್.ಪಾಟೀಲ್ ಅವರನ್ನು ಮುಖ್ಯಮಂತ್ರಿಗಳ ಸಲಹೆಗಾರರಾಗಿ ನೇಮಕಗೊಳಿಸಿದ್ದು  ಹರ್ಷ ತರಿಸಿದೆ. ಸಿದ್ಧಾಂತದ ವ್ಯಕ್ತಿಯಾಗಿದ್ದಾರೆ. ಎಲ್ಲ ರಂಗಳಲ್ಲಿರುವ ಅಪಾರ  ಅನುಭವವನ್ನು ಆಡಳಿತಕ್ಕೆ ನೀಡುವ ಮೂಲಕ ಸರ್ಕಾರ ಇನ್ನಷ್ಟು ಜನಪರವಾಗುವಂತ ಮಾದರಿ ಕೆಲಸ ಮಾಡಲಿದ್ದಾರೆ.
| ಹಣಮಂತ ಭೂಸನೂರ
 ಕೆಪಿಸಿಸಿ ಮಾಜಿ ಸದಸ್ಯ