ಮಂಡ್ಯ: ಸಾಮಾಜಿಕ ಪಿಂಚಣಿ ಅಥವಾ ಸಹಾಯಧನದಲ್ಲಿ ರೈತರ ಸಾಲ ಕಟಾವು ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರೈತರ ಕುಂದು ಕೊರೆತ ಸಭೆಯಲ್ಲಿ ಮಾತನಾಡಿದ ಅವರು, ರೈತರ ಖಾತೆಗೆ ವಿವಿಧ ಯೋಜನೆಯಡಿ ಜಮೆಯಾಗುವ ಸಹಾಯಧನ ಹಾಗೂ ಸಾಮಾಜಿಕ ಪಿಂಚಣಿ ಹಣದಲ್ಲಿ ಅವರ ಸಾಲದ ಹಣವನ್ನು ಬ್ಯಾಂಕ್‌ನವರು ಕಟಾವು ಮಾಡಬಾರದು ಎಂದರು.
ರೈತರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಸಾಲಕ್ಕೆ ಸಂಬಂಧಿಸಿದಂತೆ ಸಿವಿಲ್ ಸ್ಕೋರ್‌ಗಳನ್ನು ಲೆಕ್ಕ ಮಾಡುವಾಗ ಬೆಳೆ ಸಾಲದ ಸಾಲವನ್ನು ಲೆಕ್ಕಾಚಾರ ಮಾಡುತ್ತಾರೆ. ಇದರಿಂದಾಗಿ ಸಾಲ ದೊರಕುವುದು ಕಷ್ಟಕರವಾಗುತ್ತಿದೆ ಎಂದು ಕೆಲವರ ಸಭೆಯಲ್ಲಿ ಚರ್ಚೆ ಮಾಡಿದಾಗ ಪ್ರತಿಕ್ರಿಯಿಸಿದ ಡಿಸಿ, ಈ ಕುರಿತು ಡಿ.ಎಲ್.ಬಿ.ಸಿ ಸಭೆಯಲ್ಲಿ ಚರ್ಚಿಸಿ ಪ್ರಸ್ತಾವನೆಯನ್ನು ರಾಜ್ಯಮಟ್ಟಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಅಂತೆಯೇ ಮೈಷುಗರ್ ಕಾರ್ಖಾನೆಯಲ್ಲಿ ತಾಂತ್ರಿಕ ಸಿಬ್ಬಂದಿಯ ಕೊರತೆ ಇಲ್ಲ. ಮೆಕಾನಿಕಲ್ ಇಂಜಿನಿಯರ್, ಚೀಫ್ ಕೆಮಿಸಟ್ರೆಿ ಪರ್ಸನ್ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೊಂದಿಗೆ ಆರ್.ಬಿ.ಟೆಕ್ ಸಂಸ್ಥೆಯವರು ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಸಕ್ಕರೆ ಕಾರ್ಖಾನೆಗೆ ಟರ್ಬೈನ್ ಜು.26ರಂದು ಸರಬರಾಜು ಆಗಬೇಕಿದೆ. ಅವರಿಗೆ ಅಂತಿಮ ಗಡುವು ನೀಡಲಾಗಿದ್ದು, ಜುಲೈ 31 ರಂದು ಸರಬರಾಜು ಆಗಲಿದೆ. ಸಕ್ಕರೆ ಕಾರ್ಖಾನೆಗಳು ರೈತರಿಂದ ಖರೀದಿಸುವ ಕಬ್ಬಿಗೆ ನಿಗದಿತ ಅವದಿಯಲ್ಲಿ ಹಣ ನೀಡಿ. ಕಬ್ಬಿಗೆ ಹೊಸ ದರ ನಿಗದಿಯಾದಲ್ಲಿ ವ್ಯತ್ಯಾಸವನ್ನು ನಂತರ ಪಾವತಿಸಬಹುದು ಎಂದರು.
ರೈತರು ಬೆಳೆದ ಬೆಳೆ ಕಾಡುಪ್ರಾಣಿಗಳಿಂದ ಹಾನಿಯಾಗಿರುವುದು ವರದಿಯಾಗುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ಕಾಡು ಪ್ರಾಣಿಗಳು ರೈತರು ಬೆಳೆದ ಬೆಳೆಗೆ ಲಗ್ಗೆ ಹಾಕದಂತೆ ಎಚ್ಚರ ವಹಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗುವುದು. ಅಂತೆಯೇ ತಾಲೂಕು ಕಚೇರಿಯಲ್ಲಿ ಕೆಲಸ ಮಾಡಿಕೊಡಲು ವಿಳಂಬವಾಗುತ್ತಿದೆ ಎಂಬ ಸಾರ್ವಜನಿಕರಿಂದ ಸಾಕಷ್ಟು ದೂರು ಕೇಳಿಬಂದಿದ್ದು, ವಿಶೇಷವಾಗಿ ಹೋಬಳಿ ಮಟ್ಟದಲ್ಲಿ ಬೃಹತ್ ಪೌತಿಖಾತೆ ಆಂದೋಲನವನ್ನು ಆಯೋಜಿಸಲಾಗುವುದು. ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಅಧಿಕಾರಿ, ಪಿಡಿಒ ಗಳು ಕಡ್ಡಾಯವಾಗಿ ಗ್ರಾಮದಲ್ಲೇ ಇದ್ದು, ಸಾರ್ವಜನಿಕರನ್ನು ಅಲೆದಾಡಿಸದೇ ಅವರ ಸಮಸ್ಯೆ ಪರಿಹರಿಸಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಹವಾಮಾನ ಬದಲಾವಣೆಯಿಂದ ಅತಿವೃಷ್ಠಿ ಹಾಗೂ ಅನಾವೃಷ್ಠಿಗೆ ತುತ್ತಾಗಿ ರೈತರ ಬೆಳೆ ಹಾಳಾಗುತ್ತಿದೆ. ಹಾಗಾಗಿ ಹವಾಮಾನ ಬದಲಾವಣೆಗೆ ತಕ್ಕಂತೆ ರೈತರು ಬೆಳೆ ಬೆಳೆಯಬೇಕು. ಇದಕ್ಕೆ ಸಂಬಂಧಪಟ್ಟ ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಕಾಲಕಾಲಕ್ಕೆ ಮಾಹಿತಿ ಒದಗಿಸಬೇಕು ಎಂದು ತಿಳಿಸಿದರು.
ಕಬ್ಬು ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಶಾಸನ ಸಭೆಯಲ್ಲಿ ಚರ್ಚಿಸಲಾಗುವುದು. ಬಹುವಾರ್ಷಿಕ ಬೆಳೆಗಳಾದ ತೆಂಗು, ಅಡಿಕೆ ಹಾಗೂ ರಸಗೊಬ್ಬರಗಳ ವಿತರಣೆಯಲ್ಲಿ ಎಲ್ಲೂ ಲೋಪ ಉಂಟಾಗದಂತೆ ಎಚ್ಚರವಹಿಸಲಾಗುವುದು ಎಂದರು. ಇಂದಿನ ರೈತರ ಕುಂದು ಕೊರತೆ ಸಭೆಯಲ್ಲಿ ಚರ್ಚಿಸಲಾಗಿರುವ ಎಲ್ಲಾ ವಿಷಯವನ್ನು ಮುಂದಿನ ಶಾಸಕಾಂಗ ಸಭೆಯಲ್ಲಿ ರೈತ ಹಾಗೂ ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ಬಗ್ಗೆ ಚರ್ಚಿಸಿಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಅಶೋಕ್, ಅಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಎಂ.ಪಿ.ಕೃಷ್ಣಕುಮಾರ್ ಇತರರಿದ್ದರು.